ADVERTISEMENT

ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ, ಕೂದಲೆಳೆ ಅಂತರದಲ್ಲಿ ಪಾರು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಹಂಗಳ ಗ್ರಾಮದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 20:34 IST
Last Updated 1 ಫೆಬ್ರುವರಿ 2019, 20:34 IST
ಹುಲಿ ದಾಳಿಯಲ್ಲಿ ಗಾಯಗೊಂಡಿರುವ ರಾಮು ಹಾಗೂ ಹುಲಿ ಅವಿತು ಕುಳಿತಿರುವ ಪೊದೆ
ಹುಲಿ ದಾಳಿಯಲ್ಲಿ ಗಾಯಗೊಂಡಿರುವ ರಾಮು ಹಾಗೂ ಹುಲಿ ಅವಿತು ಕುಳಿತಿರುವ ಪೊದೆ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಹಂಗಳ ಗ್ರಾಮದ ಜಮೀನೊಂದಕ್ಕೆ ಶುಕ್ರವಾರ ನುಗ್ಗಿರುವ ಹೆಣ್ಣು ಹುಲಿಯೊಂದು ಅರಣ್ಯ ಇಲಾಖೆ ಸಿಬ್ಬಂದಿ ರಾಮು ಎಂಬುವವರ ಮೇಲೆ ದಾಳಿ ಮಾಡಿದೆ.

ಬಲಗೈ ತೋಳಿನ ಮಾಂಸ ಕಿತ್ತು ಬಂದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹುಲಿಯನ್ನು ಕಾಡಿಗೆ ಓಡಿಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ವೇಳೆ ದಾಳಿ ಮಾಡಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ಆರೇಳು ವರ್ಷ ವಯಸ್ಸಿನ ಹುಲಿಯು ಬೆಳಿಗ್ಗೆ ಕುಂದುಕೆರೆ ವಲಯದ ಭಾಗದಿಂದ ಕಲ್ಲಿಗೌಡನಹಳ್ಳಿ ಮಾರಮ್ಮ ದೇವಿಯ ಗುಡಿಯ ಬಳಿ ಬಂದಿದೆ. ಇದನ್ನು ನೋಡಿದಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು.

ADVERTISEMENT

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹುಲಿಯನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡಿದಾಗ ಎದುರುಗಡೆಯಿಂದ ಬಂದ ಸಾರ್ವಜನಿಕರಿಗೆ ಹೆದರಿ ಪೊದೆಯೊಂದರಲ್ಲಿ ಅಡಗಿ ಕುಳಿತಿದೆ. ಓಡಿಸಲು ಯತ್ನಿಸುತ್ತಿದ್ದಾಗ, ವಾಚರ್ ರಾಮು ಮೇಲೆ ದಾಳಿ ಮಾಡಿದೆ.

ಹುಲಿ ಪೊದೆಯಿಂದ ಇನ್ನೂ ಹೊರ ಬಂದಿಲ್ಲ. ನಾಗರಹೊಳೆಯಿಂದ ಆನೆಗಳು ಬಂದ ನಂತರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.