ADVERTISEMENT

ಒಟ್ಟಿಗೆ ಕಾಣಿಸಿಕೊಂಡಿರುವ 5 ಹುಲಿ ಸೆರೆಗೆ ಬೋನು, ಅರವಳಿಕೆ ಬಳಸಿ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 16:01 IST
Last Updated 23 ಡಿಸೆಂಬರ್ 2025, 16:01 IST
<div class="paragraphs"><p>ಬೋನು</p></div>

ಬೋನು

   

ಬೆಂಗಳೂರು: ‘ಚಾಮರಾಜನಗರ ತಾಲ್ಲೂಕಿನ ನಂಜೇದೇವಪುರದಲ್ಲಿ ಕಾಣಿಸಿಕೊಂಡಿರುವ ಐದು ಹುಲಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮೊದಲಿಗೆ ಬೋನುಗಳನ್ನು ಅಳವಡಿಸಬೇಕು. ಅಗತ್ಯವಿದ್ದರೆ ಅರಿವಳಿಕೆ ನೀಡಿ ಸೆರೆ ಹಿಡಿಯಬೇಕು’ ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ವಿಡಿಯೊ ಸಂವಾದದ ಮೂಲಕ ಮಂಗಳವಾರ ತುರ್ತು ಸಭೆ ನಡೆಸಿದ ಖಂಡ್ರೆ, ‘ಖಾಸಗಿ ಜಮೀನಿನಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಜೀವಹಾನಿ ಆಗದ ರೀತಿಯಲ್ಲಿ ಮತ್ತು ವನ್ಯಜೀವಿಗಳಿಗೂ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಹುಲಿಗಳ ಚಲನವಲನದ ಮೇಲೆ ಸತತ ನಿಗಾ ಅತ್ಯಗತ್ಯ. ಡ್ರೋನ್ ಕ್ಯಾಮೆರಾಗಳು, ಥರ್ಮಲ್ ಕ್ಯಾಮೆರಾಗಳನ್ನು ಬಳಸಿ ಹುಲಿಗಳು ಎಲ್ಲಿವೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಗ್ರಾಮಸ್ಥರಿಗೆ ತಕ್ಷಣ ಮಾಹಿತಿ ನೀಡಬೇಕು ಮತ್ತು ಅಲ್ಲಿಗೆ ಅರಣ್ಯ ಇಲಾಖೆಯ ತಂಡಗಳನ್ನು ಕಳುಹಿಸಿ ಯಾವುದೇ ಅನಾಹುತ ಆಗದಂತೆ ಕ್ರಮ ವಹಿಸಬೇಕು’ ಎಂದರು.

‘ಐದು ಹುಲಿಗಳ ಕಾರ್ಯಾಚರಣೆ ಸುಲಭದ ಕೆಲಸವಲ್ಲ. ಹುಲಿಗಳನ್ನು ಹಿಡಿಯುವಾಗ ಕಾರ್ಯಾಚರಣೆ ತಂಡದ ಮೇಲೆ ದಾಳಿ ಮಾಡದಂತೆ ಮತ್ತು ಬಡಗಲಪುರದಲ್ಲಿ ಹುಲಿ ರಕ್ಷಣೆ ಕಾರ್ಯಾಚರಣೆ ವೇಳೆ ವ್ಯಕ್ತಿಯ ಮೇಲೆ ದಾಳಿ ಆಗಿರುವಂತಹ ಪ್ರಕರಣಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಸಿಬ್ಬಂದಿಯ ಸುರಕ್ಷತೆಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು’ ಎಂದರು.

ವೈದ್ಯರ ನಿಯೋಜನೆ: ‘ಹುಲಿಗಳ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಸಲಕರಣೆ, ಹೆಚ್ಚುವರಿ ಪಶುವೈದ್ಯರು, ಶಾರ್ಪ್ ಶೂಟರ್‌ಗಳನ್ನೂ ನಿಯೋಜಿಸಬೇಕು ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣವೇ ತರಿಸಿಕೊಳ್ಳಬೇಕು. ಅಲ್ಲದೆ, ಕಾಡಿನಿಂದ ನಾಡಿನತ್ತ ವನ್ಯಜೀವಿಗಳು ಬಾರದಂತೆ ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಅಧಿಕಾರಿಗಳು, ತಜ್ಞರೊಂದಿಗೆ ಚರ್ಚಿಸಿ ರೂಪುರೇಷೆ ತಯಾರಿಸಿ, ವರದಿ ಸಲ್ಲಿಸಬೇಕು’ ಎಂದೂ ಸೂಚಿಸಿದರು.

ತುರುವೇಕೆರೆಯಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆ, ಮಹಿಳೆಯ ದೇಹದ ಮಾಂಸ ಭಕ್ಷಣೆ ಮಾಡಿರುವ ಕಾರಣ ಅದನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಹಿರಿಯ ಅಧಿಕಾರಿಗಳಾದ ಮನೋಜ್, ಬಿಸ್ವಜಿತ್ ಮಿಶ್ರಾ ಮತ್ತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.