ADVERTISEMENT

Tiger Claw: ಅಮ್ಮನ ಕೊನೆಯ ಪ್ರೀತಿ ಕಳೆದುಕೊಂಡದ್ದು ಶೂನ್ಯದಂತಾಯಿತು– ಜಗ್ಗೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2023, 10:16 IST
Last Updated 26 ಅಕ್ಟೋಬರ್ 2023, 10:16 IST
<div class="paragraphs"><p>ಜಗ್ಗೇಶ್‌</p></div>

ಜಗ್ಗೇಶ್‌

   

ಬೆಂಗಳೂರು: ಹುಲಿ ಉಗುರಿನ ಪದಕ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯರೂ ಆಗಿರುವ ಚಿತ್ರನಟ ಜಗ್ಗೇಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಬರಹವನ್ನು ಪೋಸ್ಟ್‌ ಮಾಡಿದ್ದಾರೆ. 

ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಮಲ್ಲೇಶ್ವರದಲ್ಲಿರುವ ಜಗ್ಗೇಶ್‌ ಅವರ ಮನೆಯಲ್ಲಿ ತಪಾಸಣೆಗಾಗಿ ನಿನ್ನೆ ಸಂಜೆ ತೆರಳಿತ್ತು. ಅವರು ಮನೆಯಲ್ಲಿರಲಿಲ್ಲ. ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ಹುಲಿಯ ಉಗುರುಗಳಿರುವ ಚಿನ್ನದ ಲಾಕೆಟ್ ಅನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದರು.

ADVERTISEMENT

ನನಗೆ 61 ವರ್ಷ, ಮುಂದೆ 100 ಆಗಬಹುದು. ನನ್ನ ತಾಯಿ ನನ್ನ ದೇವರು. ನಾನು ಏನು ಕಳೆದುಕೊಂಡರೂ ಸಂಕಟಪಡುವುದಿಲ್ಲ. ಆದರೆ ನನ್ನ ಅಮ್ಮನ ಕಡೆಯ ಪ್ರೀತಿ ಕಳೆದುಕೊಂಡದ್ದು ಶೂನ್ಯದಂತೆ ಆಯಿತು. ತಂದೆತಾಯಿಯನ್ನು ಹೃದಯದಲ್ಲಿ ಇರಿಸಿಕೊಂಡಿದ್ದೇನೆ. ತಂದೆತಾಯಿಯನ್ನು ಅನಾಥಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ಞಾನಿಗಳಿಗೆ ಆ ಪ್ರೀತಿಯ ಅರಿವಾಗದು! ದೇವರಿದ್ದಾನೆ ಉತ್ತರಿಸಲು ಕಾಲಬರುತ್ತದೆ. ನಿಮಗೂ ನಮಸ್ಕಾರ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಜಗ್ಗೇಶ್‌ ಕೂಡ ಹುಲಿಯ ಉಗುರುಗಳನ್ನು ಒಳಗೊಂಡ ಚಿನ್ನದ ಲಾಕೆಟ್‌ ಧರಿಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಜಗ್ಗೇಶ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿತ್ತು.

ಜಗ್ಗೇಶ್‌ ಅವರ ಮನೆಯಲ್ಲಿ ನಾವು ತಪಾಸಣೆ ನಡೆಸಿಲ್ಲ. ಅವರ ಪತ್ನಿ ಹುಲಿ ಉಗುರುಗಳಿರುವ ಲಾಕೆಟ್ ಒಪ್ಪಿಸಿದ್ದಾರೆ. 40 ವರ್ಷ ಹಳೆಯದು ಎಂದು ಅವರು ಮಾಹಿತಿ ನೀಡಿದ್ದಾರೆ. ಅದರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಡೆಹ್ರಾಡೂನ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಹುಲಿ ಉಗುರು ಎಂದು ಖಚಿತವಾದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಡಿಸಿಎಫ್‌ ರವೀಂದ್ರ ಹೇಳಿದ್ದಾರೆ

 ಹುಲಿ ಉಗುರನ್ನು ಒಳಗೊಂಡಿರುವ ಲಾಕೆಟ್‌ ಧರಿಸಿದ ಆರೋಪದ ಮೇಲೆ ಚಿತ್ರನಟರು, ಸ್ವಾಮೀಜಿಗಳು, ರಾಜಕೀಯ ಮುಖಂಡರ ಮನೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ.

ಹುಲಿ ಉಗುರು, ಹಲ್ಲು, ಚರ್ಮ ಬಳಕೆ ಮಾಡುತ್ತಿರುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆ, ದೂರುಗಳು ಮಾತ್ರವಲ್ಲದೆ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿ ಆಧರಿಸಿ ರಾಜ್ಯದ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.