ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳು ಮೃತಪಟ್ಟ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಎಂ.ಎಂ ಹಿಲ್ಸ್ ವನ್ಯಜೀವಿ ವಿಭಾಗದ ಡಿಸಿಎಫ್ ವೈ.ಚಕ್ರಪಾಣಿ, ಹನೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ಗಜಾನನ ಹೆಗಡೆ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮಾದೇಶ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ರಸ್ತೆಯಿಂದ ಕೇವಲ 100 ಮೀಟರ್ ಅಂತರದಲ್ಲಿ ಸತ್ತು ಬಿದ್ದಿದ್ದರೂ ಎರಡು ದಿನಗಳವರೆಗೆ ಇಲಾಖೆ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು ಹಾಗೂ ಹುಲಿಗಳು ಮೃತಪಟ್ಟ ಜಾಗದಿಂದ 800 ಮೀಟರ್ ದೂರದಲ್ಲಿ ಕಳ್ಳಬೇಟೆ ಶಿಬಿರವಿದ್ದರೂ ವನ್ಯಜೀವಿಗಳ ರಕ್ಷಣೆ ಮಾಡಲು ಸಾಧ್ಯವಾಗದಿರುವುದು ಅತ್ಯಂತ ಗಂಭೀರ ಲೋಪವಾಗಿದೆ.
ಮೂರು ತಿಂಗಳುಗಳಿಂದ ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿಗೆ ವೇತನ, ಭತ್ಯೆ ನೀಡದಿರುವುದರಿಂದ ಗಸ್ತು ಕಾರ್ಯಕ್ಕೆ ಅಡ್ಡಿಯಾಗಿದೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಹಾಗೂ ಗಸ್ತು ಸಿಬ್ಬಂದಿಯ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡುಬಂದಿದೆ.
ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯಬೇಕಾಗಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮೂವರು ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುತ್ತಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಹುಲಿಗಳಿಗೆ ವಿಷವಿಕ್ಕಿ ಕೊಂದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಸೋಮವಾರ ಹನೂರು ಜೆಎಂಎಫ್‌ಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು.
ಪ್ರಕರಣದಲ್ಲಿ ತನಿಖೆಯ ಅಗತ್ಯವಿದ್ದು ವಶಕ್ಕೆ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಕಾವ್ಯಶ್ರೀ ಜುಲೈ 3ರವರೆಗೆ ಆರೋಪಿಗಳನ್ನು ವಶಕ್ಕೆ ನೀಡಿ ಆದೇಶಿಸಿದರು.
ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಆಗುತ್ತಿದೆ. ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಿಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದುಈಶ್ವರ ಬಿ.ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.