ADVERTISEMENT

‘ಟಿಪ್ಪು ನಿಜ ಕನಸುಗಳು’ ಕೃತಿಗೆ ಗೆಲುವು: ಅಡ್ಡಂಡ ಕಾರ್ಯಪ್ಪ

ದೂರು ಹಿಂಪಡೆದ ಎಸ್‌ಡಿಪಿಐ ಕಾರ್ಯಕರ್ತ ಬಿ.ಎಸ್‌.ರಫೀವುಲ್ಲಾ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 13:03 IST
Last Updated 2 ಫೆಬ್ರುವರಿ 2023, 13:03 IST
ಅಡ್ಡಂಡ ಸಿ.ಕಾರ್ಯಪ್ಪ
ಅಡ್ಡಂಡ ಸಿ.ಕಾರ್ಯಪ್ಪ   

ವಿಜಯಪುರ: ‘ಟಿಪ್ಪು ನಿಜ ಕನಸುಗಳು’ ಕೃತಿಯನ್ನು ನಿಷೇಧಿಸಬೇಕು, ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಎಸ್‌ಡಿಪಿಐ ಕಾರ್ಯಕರ್ತ ಬಿ.ಎಸ್‌.ರಫೀವುಲ್ಲಾ ಎಂಬುವವರು ಬೆಂಗಳೂರು ಕೋರ್ಟ್‌ನಲ್ಲಿ ಸಲ್ಲಿಸಿರುವ ದೂರನ್ನು ಹಿಂಪಡೆಯ ಮೂಲಕ ಫಲಾಯನ ಮಾಡಿದ್ದಾರೆ, ಕೃತಿಗೆ ಗೆಲುವು ಸಿಕ್ಕಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ನಿಜ ಕನಸುಗಳು’ ನಾಟಕದಲ್ಲಿ ಟಿಪ್ಪು ಸುಲ್ತಾನ್‌ನನ್ನು ಅವಮಾನಿಸಲಾಗಿದೆ, ಪವಿತ್ರ ಆಜಾನ್‌ ಅನ್ನು ನಾಟಕದಲ್ಲಿ ಬಳಸಲಾಗಿದೆ ಮತ್ತು ಮುಸ್ಲಿಮರನ್ನು ತುರುಕರು ಎಂದು ಸಂಬೋಧಿಸುವ ಮೂಲಕ ಮುಸ್ಲಿಮರಿಗೆ ನೋವುಂಟು ಮಾಡಿ, ಸಮಾಜದಲ್ಲಿ ಅಶಾಂತಿ ಮೂಡಿಸಲಾಗುತ್ತಿದೆ ಎಂದು ದೂರು ದಾಖಲಿಸಿದ್ದರು ಎಂದು ಅವರು ಹೇಳಿದರು.

ದೂರಿನ ಹಿನ್ನೆಲೆಯಲ್ಲಿ ಕೃತಿಯನ್ನು ನಿಷೇಧಿಸಿ ಕೋರ್ಟ್‌ ಆದೇಶಿಸಿತ್ತು. ಆದರೆ, ನಾಟಕ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಆದೇಶದಲ್ಲಿ ತಿಳಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನ ನಡೆದಿತ್ತು ಎಂದು ತಿಳಿಸಿದರು.

ADVERTISEMENT

ಪುಸ್ತಕದಲ್ಲಿರುವ ಪ್ರತಿಯೊಂದು ಅಂಶಗಳ ಬಗ್ಗೆ ಪೂರಕ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ನಾಟಕಗಳಲ್ಲಿ ಗಣಪತಿ ಸ್ತೋತ್ರ, ಭಜನೆ ಬಳಸುವಂತೆ ಆಜಾನ್‌ ಕೂಡ ಒಂದು ಪ್ರಾರ್ಥನೆಯಾಗಿ ಬಳಸಲಾಗಿದೆಯೇ ಹೊರತು, ಅಗೌರವ ತೋರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು ಎಂದರು.

ಮುಸ್ಲಿಮರನ್ನು ತುರುಕರು ಎಂದು ಕರೆಯುವ ಸಂಪ್ರದಾಯ ಎಲ್ಲ ಕಡೆ ಬಳಕೆಯಲ್ಲಿದೆ. ಈಗಲೂ ಇದೆ. ಅದು ಅವಮಾನಿಸಲು ಬಳಸಿದ ಪದ ಅಲ್ಲ ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಲಾಗಿತ್ತು ಎಂದು ಹೇಳಿದರು.

ಟಿಪ್ಪು ಸುಲ್ತಾನ್‌ ಒಬ್ಬ ರಾಜ, ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತನ ಇನ್ನೊಂದು ಮುಖವನ್ನು ಚರಿತ್ರೆಯ ದಾಖಲೆಯಿಂದ ಹೆಕ್ಕಿ ನಾಟಕ ಬರೆಯಲಾಗಿದೆ. ಆತ ಕೊಡವರನ್ನು ಮತ್ತು ಮಂಗಳೂರು ಕ್ರಿಶ್ಚಿಯನ್ನರನ್ನು ಮತಾಂತರಿಸಿದ್ದು, ಮೇಲುಕೋಟೆ ಅಯ್ಯಂಗಾರರನ್ನು ಮಾರಣ ಹೋಮ ಮಾಡಿರುವುದು, ಹಂಪಿ ಸೇರಿದಂತೆ ಅನೇಕ ದೇವಾಲಯ ದ್ವಂಸ ಗೊಳಿಸಿರುವುದಕ್ಕೆ ಸಂಬಂಧಿಸಿದ ಚಾರಿತ್ರಿಕ ಸಾಕ್ಷಿಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು ಎಂದರು.

ಕೃತಿ ಮತ್ತು ನಾಟಕದಲ್ಲಿ ಎಲ್ಲಿಯೂ ಕೂಡ ಮುಸ್ಲಿಮರನ್ನು ಅವಮಾನಿಸಿಲ್ಲ. ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಆತ ಮುಸ್ಲಿಮರ ಪ್ರತಿನಿಧಿಯಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಲಾಗಿತ್ತು. ಅಷ್ಟರಲ್ಲೇ ಪ್ರಕರಣವನ್ನು ಹಿಂಪಡೆಯಲಾಗಿದೆ. ಹೀಗಾಗಿ ನಾಟಕಕ್ಕೆ ಗೆಲುವು ಸಿಕ್ಕಂತಾಗಿದೆ ಎಂದು ಹೇಳಿದರು.

ಆಗ್ರಹ:

ನವದೆಹಲಿಯಲ್ಲಿ ಮೊಘಲ್‌ ಗಾರ್ಡನ್‌ ಹೆಸರನ್ನು ತೆಗೆದು ಅಮೃತ ಉದ್ಯಾನ ಎಂದು ಪ್ರಧಾನಿ ಮೋದಿ ಅವರು ಮರು ನಾಮಕರಣ ಮಾಡಿರುವಂತೆ ಆಲಮಟ್ಟಿ ಉದ್ಯಾನ ಮೊಘಲ್‌ ಗಾರ್ಡನ್‌ ಹೆಸರು ತೆಗೆದು, ಹರ್ಡೇಕರ್‌ ಮಂಜಪ್ಪ ಹೆಸರನ್ನು ನಾಮಕರಣ ಮಾಡಬೇಕು. ಬಳ್ಳಾರಿ ಕೋಟೆಯ ಮೇಲೆ ಟಿಪ್ಪು ಕೋಟೆ ಎಂದು ಬರೆದಿರುವುದನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.