ADVERTISEMENT

ಟಿಪ್ಪು ಜಯಂತಿ ವೇಳೆ ಕಾನೂನು ಉಲ್ಲಂಘಿಸಿದರೆ ಕ್ರಮ: ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 9:38 IST
Last Updated 4 ನವೆಂಬರ್ 2018, 9:38 IST
   

ಬೆಂಗಳೂರು: ಯಾರೇ ವಿರೋಧ ವ್ಯಕ್ತಪಡಿಸಿದರೂ ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಅನಗತ್ಯವಾಗಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಅವರು ಎಷ್ಟೇ ವಿರೋಧಿಸಿದರೂ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪುವಿನ ಜಯಂತಿಯನ್ನು ಸರ್ಕಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಆಚರಿಸಲಿದೆ ಎಂದರು.

ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತಕುಮಾರ್ ಹೆಗಡೆ ಪತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರೋಟೋಕಾಲ್ ಪ್ರಕಾರ ಅವರ ಹೆಸರು ಹಾಕಲಾಗಿದೆ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ.

ADVERTISEMENT

ಚಿದಾನಂದ ಮೂರ್ತಿ ಅವರ ಬಗ್ಗೆ ಅಪಾರ ಗೌರವವಿದೆ. ಪ್ರತಿಯೊಬ್ಬರಿಗೂ ವಾಕ್‌ಸ್ವಾತಂತ್ರ್ಯವಿದ್ದು, ಅದರಂತೆ ಅವರು ತಮ್ಮ‌ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಟಿಪ್ಪು ಆಚರಣೆ ವಿಚಾರ ಹಿಂದಿಯೇ ತೀರ್ಮಾನವಾದ್ದರಿಂದ‌ ಅದರಂತೆಯೇ ಮಾಡಲಿದ್ದೇವೆ ಎಂದರು.

ಬಿಜೆಪಿಯವರು ಟಿಪ್ಪು ವಿಚಾರ ಇಟ್ಟುಕೊಂಡು‌ ಕೋಮು ಸೌಹಾರ್ಧ ಕದಡುವ ಕೆಲಸ‌ ಮಾಡುತ್ತಿದ್ದಾರೆ.‌ಇದಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ‌ ಎಂದು ಎಚ್ಚರಿಕೆ ನೀಡಿದರು.

ಆದರೆ, ಕಾನೂನು ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಸಹಿಸುವುದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಸೋಮವಾರ ಪೊಲೀಸ್ ವರಿಷ್ಠರ ಜೊತೆ ಸಭೆ ನಡೆಸಲಿದ್ದೇನೆ. ಕೆಎಸ್ ಆರ್ ಪಿ ಮತ್ತು ಸಿಆರ್ ಅವರನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಬಳಸಿಕೊಳ್ಳಲಾಗುವುದು ಎಂದರು.

ಉಪಚುನಾವಣೆಯ ಐದಕ್ಕೆ ಐದು ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ಭರವಸೆ ಇದೆ. ಹಣದ ಆಮಿಷ ಮತ್ತು ಆಪರೇಷನ್ ಕಮಲದ ಬಗ್ಗೆ ಬಿಜೆಪಿ ನಾಯಕರು ನುರಿತರು. ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಗ ತಪ್ಪು ಅರಿತುಕೊಂಡು ವಾಪಸ್ ಬಂದಿದ್ದಾರೆ. ಅವರಿಗೆ ಯಾವುದೇ ಹಣದ ಆಮಿಷ ನೀಡಿಲ್ಲ‌ ಎಂದರು.

ಉಪಚುನಾವಣೆ ಫಲಿತಾಂಶದ ಬಳಿಕ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ‌ ಮಾಡಲಾಗುವುದು.‌ ನಿಗಮ‌ ಮಂಡಳಿಗೆ ಆದಷ್ಟು ಶಾಸಕರನ್ನೇ ನೇಮಕ ಮಾಡಲಾಗುವುದು.ನಾನು ದೆಹಲಿಗೆ ಹೋಗಲ್ಲ, ಡಿ.ಕೆ. ಶಿವಕುಮಾರ್ ಯಾಕೆ ಹೋಗಿದ್ದಾರೆ ಗೊತ್ತಿಲ್ಲ‌ ಎಂದರು.

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಲಿದ್ದೇವೆ. ಈ ಸಂಬಂಧ ದೆಹಲಿ ಮಾದರಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.