ಮೈಸೂರು: ‘ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ದಸರಾ ಮುನ್ನಡೆಸಿದ್ದು ಹೈದಾರಲಿ ಹಾಗೂ ಟಿಪ್ಪು ಸುಲ್ತಾನ್. ಇದನ್ನು ಮರೆಯಬಾರದು’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿಯ ಕೆಲವರಿಂದ ವಿರೋಧ ವ್ಯಕ್ತವಾಗಿರುವ ಕುರಿತು ಇಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಕರೆಯುತ್ತೇವೆ’ ಎಂದರು.
‘ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸಿದ್ದಾಗ ನಾವು ಟೀಕೆ ಮಾಡಿರಲಿಲ್ಲ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿಯೇ ದಸರಾ ಮಾಡುತ್ತೇವೆ. ಈ ಉತ್ಸವ ಧರ್ಮ–ಜಾತಿಗೆ ಸೀಮಿತವಾಗಿಲ್ಲ. ನನ್ನ ನಂಬಿಕೆ ಏನು ಎಂಬುದನ್ನು ಎಲ್ಲರಿಗೂ ತೋರಿಸಲು ಆಗುವುದಿಲ್ಲ’ ಎಂದು ಹೇಳಿದರು.
‘ಟೀಕೆ ಮಾಡುವವರಿಗೆ ತಾಳ್ಮೆ ಇರಬೇಕು. ಬೆಂಕಿಯ ಕಾವು ತೆಗೆದುಕೊಳ್ಳಲು ಹೋಗಿ ಅದರಲ್ಲಿಯೇ ಸುಟ್ಟು ಹೋಗಬೇಡಿ’ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೇರೆ ರಾಜಕೀಯ ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡರೆ ತಪ್ಪೇನಿದೆ? ಡಿಕೆಶಿಯವರು ಆರ್‌ಎಸ್‌ಎಸ್ ಗೀತೆ ಹಾಡಿದರೆ ಅವರು ಬಿಜೆಪಿ ಪರ ಎಂದರ್ಥವಲ್ಲ. ಈ ಬಗ್ಗೆ ಮಾಜಿ ಸಚಿವ ರಾಜಣ್ಣ ಟೀಕಿಸಿರುವುದು ಸರಿಯಲ್ಲ. ಅವರ ಮಾತುಗಳನ್ನು ನಾವು ಒಪ್ಪುವುದಿಲ್ಲ. ಈ ರೀತಿ ಮಾತಾಡಿ ಮಾತಾಡಿಯೇ ಅವರು ನಷ್ಟ ಅನುಭವಿಸಿದ್ದಾರೆ’ ಎಂದು ಹೇಳಿದರು.
‘ಧರ್ಮಸ್ಥಳ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು. ತನಿಖೆ ಮಾಡಿದ್ದು ಸರಿ– ತಪ್ಪು ಎಂಬ ಚರ್ಚೆ ಸರಿಯಲ್ಲ. ದೂರುದಾರನ ಮಂಪರು ಪರೀಕ್ಷೆ ಅಗತ್ಯವಾಗಿ ಆಗಬೇಕು. ದೊಡ್ಡ ಧಾರ್ಮಿಕ ಸಂಸ್ಥೆಯ ಮೇಲೆ ಆರೋಪ ಮಾಡಿ ಯಾರೂ ದೊಡ್ಡವರಾಗಲ್ಲ. ಈ ಪ್ರಕರಣದ ಹಿಂದೆ ಯಾರದೋ ಕೈವಾಡವಿದೆ. ಆ ಸಮಾಜಘಾತಕ ಯಾರೇ ಆಗಿದ್ದರೂ ತಕ್ಕ ಶಿಕ್ಷೆ ಆಗಬೇಕು. ಸಮಾಜಘಾತಕರಿಗೆ ಜಾತಿ–ಧರ್ಮ ಇರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ನಮ್ಮ ಜಿಲ್ಲೆಯ ಹೋರಾಟಗಾರ್ತಿ ಬಾನು ಮುಷ್ತಾಕ್ ಅವರು ದಸರಾ ಉತ್ಸವ ಉದ್ಘಾಟಿಸುವುದರಲ್ಲಿ ನನಗೆ ಸಂತೋಷವಿದೆ. ಇದರಲ್ಲಿ ಹಿಂದೂ-ಮುಸ್ಲಿಂ ಭೇದಭಾವ ಮಾಡುವುದು ಸೂಕ್ತವಲ್ಲ. ನಾವೆಲ್ಲ ಭಾರತೀಯರು.ಎಚ್.ಡಿ. ರೇವಣ್ಣ ಶಾಸಕ
‘ಅಲ್ಲಾಹ್ ಹೊರುತಪಡಿಸಿ ಇಸ್ಲಾಂ ಧರ್ಮ ಇನ್ನೊಂದು ದೇವರು ಒಪ್ಪುವುದಿಲ್ಲ. ಪರಂಪರೆ ಸಂಸ್ಕೃತಿ ನಾಡದೇವತೆ ಬಗ್ಗೆ ಅಭಿಮಾನ ಭಕ್ತಿ ಇರುವವರಿಂದ ದಸರಾ ಉದ್ಘಾಟಿಸಬೇಕುಸಿ.ಟಿ.ರವಿ ವಿಧಾನಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.