ADVERTISEMENT

ಟಿಪ್ಪು, ರಾಯಣ್ಣ ಪಠ್ಯ ಕೈಬಿಟ್ಟ ಸರ್ಕಾರ: ಇದು ಗುಪ್ತ ಅಜೆಂಡಾ ಎಂದ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2020, 7:15 IST
Last Updated 29 ಜುಲೈ 2020, 7:15 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಮೊದಲಾದವರಿಗೆ ಸಂಬಂಧಿಸಿದ ಪಾಠಗಳನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

'ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಅಧಿಕೃತ ಸರ್ಕಾರ‌ ದುರ್ಬಲಗೊಳ್ಳುತ್ತಿದೆ,‌ ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

'10ನೇ ತರಗತಿ‌‌ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಂಸ್ಥೆಯೇ? ಅದನ್ನು ತಕ್ಷಣ ವಾಪಸು ಪಡೆಯಿರಿ, ಇಲ್ಲದೆ ಇದ್ದರೆ ನಿಮ್ಮ ಪಾತ್ರ ಒಪ್ಪಿಕೊಳ್ಳಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

'ಕೊರೊನಾ ನಿಯಂತ್ರಿಸಲಾಗದ ರಾಜ್ಯ ಸರ್ಕಾರ, ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿ ಗುಪ್ತ ಅಜೆಂಡಾ ಅನುಷ್ಠಾನಗೊಳಿಸಲು ಹೊರಟಿದೆ.‌‌ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಈ ಹುನ್ನಾರವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ, ಹೋರಾಟ ಅನಿವಾರ್ಯವಾಗಬಹುದು' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.