ADVERTISEMENT

ಸಹನೀಯ ಬೇಸಿಗೆ, ಸಾಮಾನ್ಯ ಮುಂಗಾರು

ಕೆಂಪು ಪಟ್ಟಿಯಲ್ಲಿ ಕರಾವಳಿ *ಮುಂದುವರಿಯುವ ‘ಲಾ ನಿನಾ’ ಪರಿಣಾಮ

ಎಸ್.ರವಿಪ್ರಕಾಶ್
Published 30 ಮಾರ್ಚ್ 2021, 19:21 IST
Last Updated 30 ಮಾರ್ಚ್ 2021, 19:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಹುತೇಕ ರಾಜ್ಯಗಳು ಈ ವರ್ಷ ಬೇಸಿಗೆಯ ಬೇಗೆಯಲ್ಲಿ ಬೆಂದರೆ, ಕರ್ನಾಟಕಕ್ಕೆ ಈ ಬಾರಿ ಅಂತಹ ತೀವ್ರ ತಾಪ ತಟ್ಟುವುದಿಲ್ಲ. ರಾಜ್ಯದಲ್ಲಿ ವಾಡಿಕೆಗಿಂತಲೂ ಕಡಿಮೆ ತಾಪಮಾನ ಇರಲಿದೆ.

ಆದರೆ, ಅಪರೂಪಕ್ಕೊಮ್ಮೆ ತಾಪಮಾನ ತಾರಕಕ್ಕೆ ಏರಿದರೂಬಹುತೇಕ ದಿನಗಳ ಉಷ್ಣಾಂಶ ಸಹನೀಯವಾಗಿರಲಿದೆ. ಭಾರತೀಯಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಬೇಸಿಗೆಯ ಮೂನ್ಸೂಚನೆಯ ಸೂಚ್ಯಂಕದಲ್ಲಿ ಕರ್ನಾಟಕದ ಕರಾವಳಿ ‘ಕೆಂಪು’ ಪಟ್ಟಿಗೆ ಸೇರಿದ್ದರೆ, ಉಳಿದ ಜಿಲ್ಲೆಗಳು ‘ಬಿಳಿ/ನೀಲಿ’ ಪಟ್ಟಿಗೆ ಸೇರಿವೆ. ‘ಬಿಳಿ/ನೀಲಿ’ ಪಟ್ಟಿಗೆ ಸೇರಿರುವುದು ಕರ್ನಾಟಕ ಮಾತ್ರ. ಇದು (ಬೇಸಿಗೆಯಲ್ಲಿ) ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಇರುವುದರ ಸೂಚ್ಯಂಕ.

ಅಲ್ಲದೆ, ‘ಲಾ ನಿನಾ’ ಪರಿಣಾಮ ಈ ವರ್ಷವೂ ಮುಂದುವರಿದಿದೆ. ಇದರಿಂದಾಗಿ ಈ ವರ್ಷ ಮತ್ತು ಮುಂದಿನ ವರ್ಷದ ಮುಂಗಾರು ಕೂಡಾ ಉತ್ತಮವಾಗಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ADVERTISEMENT

ಬೇಸಿಗೆಯ ಮಧ್ಯೆಯೇ ಹಲವೆಡೆ ಆಗ್ಗಾಗ್ಗೆ ಮಳೆಯೂ ಬೀಳಲಿದೆ. ‘ಲಾ ನಿನಾ’ ಸ್ಥಿತಿ ಸಮಭಾಜಕ ಫೆಸಿಫಿಕ್‌ ಮೇಲೆ ನೆಲೆ ನಿಂತಿದೆ. ಇದರಿಂದಾಗಿ ಸಮುದ್ರದ ಮೇಲ್ಭಾಗದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

‘ಲಾ ನಿನಾ’ ಪರಿಣಾಮ ಇದ್ದಾಗ ಉಷ್ಣಾಂಶ ಕೊಂಚ ಕಡಿಮೆ ಇರುತ್ತದೆ. ಇದು ಮುಂಗಾರಿನ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ ಮಳೆಗಾಲ ಸಹಜವಾಗಿಯೇ ಇರುತ್ತದೆ. ಆದರೆ, ರಾಜ್ಯದಲ್ಲಿ ತಾಪಮಾನ ಏರಿಕೆ ಆಗಲು ಉತ್ತರ ರಾಜ್ಯಗಳಿಂದ ಹಾದು ಬರುವ ಬಿಸಿ ಮಾರುತಗಳು ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.

ರಾಜ್ಯದಲ್ಲಿ ಈಗಾಗಲೇ ಕೆಲವೆಡೆ ಮಿಂಚು–ಗುಡುಗಿನಿಂದ ಆರಂಭವಾಗಿದ್ದು, ಮಳೆಯೂ ಸುರಿದಿದೆ. ಆಗಾಗ್ಗೆ ಮಳೆಯೂ ಬರುತ್ತದೆ. ಕರಾವಳಿ ಭಾಗದಲ್ಲಿ ಉಷ್ಣಾಂಶದ ಜತೆಗೆ ತೇವಾಂಶವೂ ಇರುವುದರಿಂದ ತಾಪಮಾನ ಹೆಚ್ಚಲಿದೆ. ಇದರಿಂದಾಗಿ ಕರಾವಳಿ ಜಿಲ್ಲೆಯ ಹಲವೆಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಮೀರಿ ಹೋಗುವ ಸಾಧ್ಯತೆ ಇದೆ. ಒಟ್ಟಾರೆ, ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸರಾಸರಿ ಉಷ್ಣಾಂಶದಲ್ಲಿ 0.55 ಡಿಗ್ರಿಯಷ್ಟು ಕಡಿಮೆ ಇರಲಿದೆ.

‘ಲಾ ನಿನಾ’ ಪರಿಣಾಮ ಎಂದರೇನು?:

‘ಲಾ ನಿನಾ’ ಪರಿಣಾಮವು ‘ಎಲ್‌ನಿನೊ’ಗೆ ಸಂಪೂರ್ಣ ತದ್ವಿರುದ್ಧವಾದುದು. ‘ಎಲ್‌ ನಿನೊ’ ಇದ್ದಾಗ ಬರ ಕಾಣಿಸಿಕೊಳ್ಳುತ್ತದೆ. ಫೆಸಿಫಿಕ್‌ ಸಾಗರದ ಮೇಲೆ ತಾಪಮಾನ ಹೆಚ್ಚಾಗುವುದರಿಂದ ‘ಎಲ್‌ ನಿನೊ’ ಪರಿಣಾಮ ಆಗುತ್ತದೆ. ಅದೇ ಫೆಸಿಫಿಕ್ ಸಾಗರದ ಮೇಲೆ ಅತ್ಯಂತ ಸಂಕೀರ್ಣವೆನಿಸುವ ನೈಸರ್ಗಿಕ ಕ್ರಿಯೆ ಜರುಗಿದಾಗ ಜಾಗತಿಕ ಹವಾಮಾನದಲ್ಲಿ ಬದಲಾವಣೆ ಆಗಿ ಶೀತಲ ವಾತಾವರಣ ನಿರ್ಮಾಣವಾಗುತ್ತೆ. ಇದಕ್ಕೆ ‘ಲಾ ನಿನಾ’ ಪರಿಣಾಮ ಎನ್ನಲಾಗುತ್ತದೆ.

‘ಲಾ ನಿನಾ’ ಪರಿಣಾಮದಲ್ಲಿ ಫೆಸಿಫಿಕ್‌ ಸಾಗರ ಮೇಲೆ ಪಶ್ಚಿಮಾಭಿಮುಖವಾಗಿ ಅಂದರೆ ಏಷ್ಯಾ ಕಡೆಯಿಂದ ದಕ್ಷಿಣ ಅಮೆರಿಕಾದ ಕಡೆಗೆ ಗಾಳಿ ಬೀಸಲಾರಂಭಿಸುತ್ತದೆ. ಸಾಗರದ ಮೇಲ್ಮೈ ಮೇಲೆ ಬೆಚ್ಚಗಿನ ನೀರಿನ ಮೇಲೆ ಗಾಳಿ ಹಾದು ಹೋಗುತ್ತದೆ. ಹೀಗೆ ಬೆಚ್ಚಗಿನ ನೀರು ಚಲಿಸಲು ಆರಂಭವಾಗುತ್ತಿದ್ದಂತೆ, ಶೀತಲ ನೀರು ಮೇಲಕ್ಕೆ ಬರುತ್ತದೆ. ಇದರಿಂದ ಫೆಸಿಫಿಕ್‌ ಸಾಗರದ ಪೂರ್ವ ಭಾಗದಲ್ಲಿ ನೀರು ಸಾಮಾನ್ಯಕ್ಕಿಂತ ಹೆಚ್ಚು ಶೀತಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.