ಬಿಜೆಪಿಯ ವಾಟ್ಸ್‌ಆ್ಯಪ್ ಚಾಟ್ ಹಂಚಿಕೊಂಡ ಖರ್ಗೆ
ಬೆಂಗಳೂರು: ನನ್ನ ವಿರುದ್ಧ ಬಿಜೆಪಿ ರೂಪಿಸಿರುವ ಸುಳ್ಳುಗಳ ಟೂಲ್‌ಕಿಟ್ ಬಹಳ ಸೊಗಸಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಮ್ಮ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆ ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಬಿಜೆಪಿಯ ಆಂದೋಲನ ಸಮಿತಿಯ ವಾಟ್ಸ್‌ಆ್ಯಪ್ ಚಾಟ್‌ಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
‘ರಾಜ್ಯದ ಜನಕ್ಕೆ ನೀವು ಎಸಗಿದ ದ್ರೋಹಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ, ನಿಮಗೂ ನೈತಿಕತೆ ಪದದ ಅರ್ಥ ತಿಳಿದಿದೆ ಎಂಬುದನ್ನು ನಿರೂಪಿಸಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೊಬೆಲ್ಸ್ ಸಿದ್ದಾಂತವನ್ನು ಮೆಚ್ಚಿ ನೆಚ್ಚಿಕೊಂಡಿರುವ ಬಿಜೆಪಿಗರು ಮುಂದಿನ ದಿನಗಳಲ್ಲಿ ಗೊಬೆಲ್ಸ್ ಕೂಡ ನಾಚುವಂತ ಸುಳ್ಳುಗಾರರಾಗಿ ಹೊರಹೊಮ್ಮಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
‘ಬಿಜೆಪಿಯಲ್ಲಿನ ಬಡಿದಾಟವನ್ನು ಮರೆಮಾಚಲು ಹೋರಾಟ ಎಂಬ ನಾಟಕ ಶುರು ಮಾಡಿಕೊಂಡಿದೆ. ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಗರನ್ನು ದಾರಾಳವಾಗಿ ಸ್ವಾಗತಿಸುತ್ತೇನೆ, ಕಾಫಿ, ಟಿ, ಬಿಸ್ಕೆಟ್ ಗಳ ಆತಿಥ್ಯವನ್ನೂ ನೀಡುತ್ತೇನೆ. ಬಿಜೆಪಿಗೆ ಅಸ್ತಿತ್ವ ಉಳಿಸಿಕೊಳ್ಳಲು ಈಗ ನನ್ನ ಹೆಸರು ಅನಿವಾರ್ಯವಾಗಿದೆ, ಹಾಗಾಗಿ ನನ್ನ ವಿರುದ್ಧದ ಪಿತೂರಿಯ “ಟೂಲ್ ಕಿಟ್“ ರೂಪಿಸಿದೆ ಎಂದು ಛೇಡಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಹೈಕಮಾಂಡಿಗೆ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಲು ನನ್ನ ಹೆಸರಿನಲ್ಲಿ ಹೋರಾಟದ ನಾಟಕ ಆರಂಭಿಸಿದ್ದಾರೆ, ನನ್ನ ಹೆಸರಿನ ಮೂಲಕ ವಿಜಯೇಂದ್ರರವರು “ಸಂಕ್ರಾಂತಿಯ ಡೆಡ್ ಲೈನ್” ದಾಟುವ ಪ್ರಯತ್ನ ನಡೆಸಿದ್ದಾರೆ! ಬಿಜೆಪಿಯವರೇ, ಸುಳ್ಳುಗಳ ಆಧಾರದಲ್ಲಿ ನನ್ನ ವಿರುದ್ಧ ಇಷ್ಟೆಲ್ಲಾ ಸುವ್ಯವಸ್ಥಿತವಾದ, ವಿವಿಧ ಮಾದರಿಯ ಹಾಗೂ ವ್ಯಾಪಕವಾದ ಹೋರಾಟ ಮಾಡುವ ಬದಲು ರಾಜ್ಯದ ಜನರೆದುರು ನಿಮ್ಮ “ನೈತಿಕತೆ“ಯನ್ನು ನಿರೂಪಿಸುವ ಹೋರಾಟ ಮಾಡಿ ಎಂದಿದ್ದಾರೆ.
ಮಹಿಳೆಯರನ್ನು ಅತ್ಯಾಚಾರಗೈದು, ದಲಿತರನ್ನು ನಿಂದಿಸಿ, ಒಕ್ಕಲಿಗ ಮಹಿಳೆಯರನ್ನು ಮಂಚಕ್ಕೆ ಕರೆದ ಮುನಿರತ್ನರವರ ವಿರುದ್ಧ ಹೋರಾಟ ಮಾಡಿ, ಆಗ ಜನ ಮೆಚ್ಚುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.