ADVERTISEMENT

ರಾಜ್ಯದಲ್ಲಿ ಬುಧವಾರದವರೆಗೆ 110 ಕೊರೊನಾ ಪ್ರಕರಣ ದೃಢ, 10 ಜನರು ಗುಣಮುಖ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 10:06 IST
Last Updated 2 ಏಪ್ರಿಲ್ 2020, 10:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಶ್ವದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಲೇ ಸಾಗಿದೆ. ರಾಜ್ಯದಲ್ಲಿಈವರೆಗೆ 110 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ಹೊಸದಾಗಿ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗಿಲ್ಲ. ಸೋಂಕಿತರ ಸಂಖ್ಯೆ ಮಂಗಳವಾರದಂತೆ 110 ಇದ್ದು, ಅವರಲ್ಲಿ 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಿಳಿಸಿದೆ.

ಕೋವಿಡ್-19 ಹರಡುವುದನ್ನು ತಡೆಯಲು ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಎಲ್ಲೆಲ್ಲಿ ಸ್ಥಳೀಯವಾಗಿ ಒಟಿಪಿಯೊಂದಿಗೆ ಆಹಾರ ಧಾನ್ಯ ಪಡೆಯಲು ತೊಂದರೆ ಇದೆಯೊ ಅಂತಹ ಪ್ರದೇಶದಲ್ಲಿ ಒಟಿಪಿ ಷರತ್ತನ್ನು ಸಡಿಲಗೊಳಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ವಿತರಣೆಯಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಕ್ರಮಕ್ಕೆ ಸೂಚಿಸಲಾಗಿದೆ.

ADVERTISEMENT

ತಾತ್ಕಾಲಿಕ ಶಿಬಿರ ಕೇಂದ್ರಗಳಲ್ಲಿನ ಶಂಕಿತ ಮತ್ತು ಖಚಿತ ಕೋವಿಡ್-19 ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಗೊಳಿಸಿ ಆರೋಗ್ಯ ಸೇವೆ ಒದಗಿಸಲು ಶಿಬಿರ ಕೇಂದ್ರಗಳಲ್ಲಿನ ಎಲ್ಲ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ.

ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಆಗಮನದ 14 ದಿನಗಳವರೆಗೂ ಎಲ್ಲಾ ವ್ಯಕ್ತಿಗಳು ಕಡ್ಡಾಯವಾಗಿ ಸರ್ಕಾರ ನಿಗದಿ ಪಡಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲು ಸೂಚಿಸಿದೆ. ಅಲ್ಲದೆ 14 ದಿನ ಪೂರೈಸಿದ ಬಳಿಕ ತಮ್ಮ ಮನೆಗಳಲ್ಲಿಯೇ 28 ದಿನದವರೆಗೂ ಕ್ವಾರಂಟೈನ್‌ನಲ್ಲಿರುವಂತೆ ತಿಳಿಸಲಾಗಿದೆ. ಅಲ್ಲಿ ಭಾಗವಹಿಸಿದ ಎಲ್ಲರೂ ಉಚಿತ ಆರೋಗ್ಯ ಸಹಾಯವಾಣಿ 080-29711171ಕ್ಕೆ ಸಂಪರ್ಕಿಸಬೇಕು.

ಮೊಬೈಲ್ ಅಪ್ಲಿಕೇಶನ್‌ ಅನ್ನು www.karnataka.gov.in ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಕೋವಿಡ್-19 ರೋಗಿಯು ಮೊದಲು 14 ದಿನ ಪ್ರಯಾಣ ಮಾಡಿದ ವಿವಿಧ ಸ್ಥಳ ಅಥವಾ ಪ್ರದೇಶಗಳ ಮಾಹಿತಿಯನ್ನು ಪಡೆಯಬಹುದು. ಜೊತೆಗೆ ಫಸ್ಟ್ ರೆಸ್ಪಾಂಡರ್ ಮತ್ತು ಸಹಾಯವಾಣಿಗಳ ಸಂಖ್ಯೆಯು ಲಭ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.