ADVERTISEMENT

ಮತದಾರರಿಗೆ ಪ್ರವಾಸ ಭಾಗ್ಯ, ಆಣೆ, ಪ್ರಮಾಣ

ತೀರ್ಥಕ್ಷೇತ್ರಗಳಿಗೆ ಜನರನ್ನು ಕರೆದೊಯ್ದ ಬಸ್‌ಗಳು, ಮುಖಂಡರ ಮನವೊಲಿಕೆಗೆ ಯತ್ನ

ಎಂ.ಎನ್.ಯೋಗೇಶ್‌
Published 26 ಮಾರ್ಚ್ 2019, 20:41 IST
Last Updated 26 ಮಾರ್ಚ್ 2019, 20:41 IST
   

ಮಂಡ್ಯ: ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರತ್ತ ಮತದಾರರನ್ನು ಸೆಳೆಯಲು ಪಕ್ಷದ ಮುಖಂಡರು ಥರಾವರಿ ಆಮಿಷ ಒಡ್ಡುತ್ತಿದ್ದಾರೆ. ತೀರ್ಥಕ್ಷೇತ್ರಗಳ ‘ಪ್ರವಾಸ ಭಾಗ್ಯ’ ಕರುಣಿಸುತ್ತಿದ್ದಾರೆ.

ಕಳೆದೊಂದು ವಾರದಿಂದ 30ಕ್ಕೂ ಹೆಚ್ಚು ಬಸ್‌ಗಳು ಹಳ್ಳಿಗಳ ಜನರನ್ನು ತೀರ್ಥಕ್ಷೇತ್ರಗಳಿಗೆ ಕರೆದೊಯ್ದಿವೆ. ಬಸ್‌ಗೊಬ್ಬರಂತೆ ಜೆಡಿಎಸ್‌ ಕಾರ್ಯಕರ್ತರನ್ನು ನೇಮಕ ಮಾಡಿದ್ದು, ಜನರು ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ. ಎರಡು ದಿನಗಳ ಪ್ರವಾಸದ ಕೊನೆಯಲ್ಲಿ ದೇವರ ಮುಂದೆ ನಿಲ್ಲಿಸಿ ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕುವ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ. ಆಣೆ ಮಾಡಿದ ಮೇಲೂ ಬೇರೆ ಅಭ್ಯರ್ಥಿಗೆ ಮತ ಹಾಕಿದರೆ ಕೆಟ್ಟದಾಗುತ್ತದೆ ಎಂದು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಊಟ, ತಿಂಡಿ ಜೊತೆಗೆ ಹಣ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲವು ಬಸ್‌ಗಳು ಧರ್ಮಸ್ಥಳ, ಉಡುಪಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಕೊಲ್ಲೂರು, ಶೃಂಗೇರಿ, ಗೋಕರ್ಣ ಭಾಗಗಳಿಗೆ ತೆರಳಿವೆ. ಇನ್ನೂ ಕೆಲವು ಬಸ್‌ಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಆಲಮಟ್ಟಿ, ಸಿಗಂದೂರು, ಸವದತ್ತಿ ಭಾಗಕ್ಕೆ ಕರೆದೊಯ್ದಿವೆ. ಬೆಂಗಳೂರು ಮೂಲದ ಟ್ರಾವೆಲ್ಸ್‌ ಕಂಪನಿಯೊಂದರ ಬಸ್‌ಗಳನ್ನು ಪ್ರವಾಸಕ್ಕೆ ಬಳಸಲಾಗಿದೆ.

ADVERTISEMENT

‘ಪ್ರವಾಸಕ್ಕೆ ಬರುವವರ ಪಟ್ಟಿ ಸಿದ್ಧವಾದ ನಂತರ ಮಧ್ಯರಾತ್ರಿ ಗ್ರಾಮಕ್ಕೆ ಬಸ್‌ ಬರುತ್ತದೆ. ನಸುಕಿನ 3.30ಕ್ಕೆ ಗ್ರಾಮ ಬಿಡಲಾಗುತ್ತದೆ. ಬಸ್‌ಗಳಲ್ಲಿರುವ ಟಿ.ವಿ.ಯಲ್ಲಿ ಕುಮಾರಸ್ವಾಮಿ ಕುರಿತು ರೂಪಿಸಲಾಗಿರುವ ಹಾಡು, ವಿಡಿಯೊ, ನಿಖಿಲ್‌ ಅಭಿನಯದ ಚಿತ್ರ ಗೀತೆಗಳ ಪ್ರದರ್ಶನ ಮಾಡಲಾಗುತ್ತದೆ. ದೇವೇಗೌಡರ ಕುಟುಂಬದ ಸಾಧನೆಗಳ ಬಗ್ಗೆ ಭಾಷಣ ಮಾಡಲಾಗುತ್ತದೆ. ಜನರ ಮನಸ್ಸು ಜೆಡಿಎಸ್‌ ಕಡೆಗೆ ತಿರುಗಿಸುವ ಯತ್ನ ಮಾಡುತ್ತಾರೆ’ ಎಂದು ಬಸ್‌ ಚಾಲಕರೊಬ್ಬರು ತಿಳಿಸಿದರು.

ಸ್ವಾಭಿಮಾನಕ್ಕೆ ಮದ್ದು: ಜಿಲ್ಲೆಯಲ್ಲಿ ಕೆಲವು ಜೆಡಿಎಸ್‌ ಕಾರ್ಯಕರ್ತರು ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಮುಖಂಡರನ್ನು ಸೆಳೆಯಲು ಬೂತ್‌ ಮಟ್ಟದಲ್ಲಿ ಜೆಡಿಎಸ್‌ ಕಾರ್ಯಕರ್ತರ ತಂಡ ರಚಿಸಲಾಗಿದೆ. ಸ್ವಾಭಿಮಾನದ ಬಗ್ಗೆ ಮಾತನಾಡುವವರ ಮನೆಗಳಿಗೆ ತೆರಳಿ, ಮನೆಯ ಮಹಿಳೆಯರು, ಮಕ್ಕಳನ್ನು ಕೂರಿಸಿಕೊಂಡು ಮನವೊಲಿಸಲಾಗುತ್ತಿದೆ.

ಅಪಪ್ರಚಾರ

ಯಾವುದೇ ಪ್ರವಾಸ ಆಯೋಜಿಸಿಲ್ಲ. ಕಾರ್ಯಕರ್ತರ ಮನವೊಲಿಸುವ ಕೆಲಸವನ್ನೂ ಮಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.