ADVERTISEMENT

ವಿದ್ಯಾರ್ಥಿಗಳಿಗೆ ‘ಕಿರ್ಲೋಸ್ಕರ್‌’ ಕೌಶಲ ತರಬೇತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 16:00 IST
Last Updated 24 ಫೆಬ್ರುವರಿ 2024, 16:00 IST
ಕರ್ನಾಟಕದ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ನ್ಯೂಜಿಲೆಂಡ್‌ನ ಆಕ್ಲೆಂಡ್‌ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ  ಡ್ಯಾಮನ್ ಸಲೆಸಾ ಜತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಒಪ್ಪಂದ ಮಾಡಿಕೊಂಡರು. ಅಂತರರಾಷ್ಟ್ರೀಯ ಶಿಕ್ಷಣದ ವ್ಯವಸ್ಥಾಪಕಿ ಲಿಸಾ ಫುಟ್ಸ್‌ಚೆಕ್‌ ಉಪಸ್ಥಿತರಿದ್ದರು  
ಕರ್ನಾಟಕದ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ನ್ಯೂಜಿಲೆಂಡ್‌ನ ಆಕ್ಲೆಂಡ್‌ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ  ಡ್ಯಾಮನ್ ಸಲೆಸಾ ಜತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಒಪ್ಪಂದ ಮಾಡಿಕೊಂಡರು. ಅಂತರರಾಷ್ಟ್ರೀಯ ಶಿಕ್ಷಣದ ವ್ಯವಸ್ಥಾಪಕಿ ಲಿಸಾ ಫುಟ್ಸ್‌ಚೆಕ್‌ ಉಪಸ್ಥಿತರಿದ್ದರು     

ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ ತರಬೇತಿ ನೀಡಲು ಟೊಯೊಟ ಕಿರ್ಲೋಸ್ಕರ್‌ ಸಂಸ್ಥೆ ಜತೆ ಉನ್ನತ ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಆಸ್ಟ್ರೇಲಿಯಾದ ಎಂಟು ವಿಶ್ವವಿದ್ಯಾಲಯಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕೋರ್ಸ್‌ ಓದುತ್ತಿರುವಾಗಲೇ ತಾಂತ್ರಿಕ ವಿಷಯಗಳ ಕುರಿತು ಹೆಚ್ಚಿನ ತರಬೇತಿ ಪಡೆಯಲಿದ್ದಾರೆ. ಪದವಿ ಪೂರೈಸುವ ಮೊದಲೇ ಉದ್ಯೋಗಾಧಾರಿತ ಕೌಶಲ ಹೊಂದಲು ಸಹಕಾರಿಯಾಗಲಿದೆ ಎಂದರು.

ರಾಜ್ಯದ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೌಲಭ್ಯಗಳ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶ ಪಡೆಯಲು ಹಿನ್ನಡೆಯಾಗಬಹುದು. ಕಿರ್ಲೋಸ್ಕರ್‌ ಹಾಗೂ ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳ ಜತೆಗಿನ ಒಪ್ಪಂದ ಅಂತಹ ಎಲ್ಲ ಕೊರತೆಗಳನ್ನೂ ನೀಗಿಸಲಿದೆ ಎಂದು ಹೇಳಿದರು.

ADVERTISEMENT

ರಾಮನಗರ ಹಾಗೂ ಬಿಡದಿಯ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳು ಟೊಯೊಟ ಕಿರ್ಲೋಸ್ಕರ್‌ ಸಂಸ್ಥೆಗೆ ಭೇಟಿ ನೀಡಿ, ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆ ಕುರಿತು ಪ್ರಾಯೋಗಿಕ ತರಬೇತಿ ಪಡೆಯಲಿದ್ದಾರೆ. ಉಳಿದ ಕಾಲೇಜುಗಳ ವಿದ್ಯಾರ್ಥಿಗಳಿಗೂ ಇಂತಹ ಸೌಲಭ್ಯ ದೊರಕಲಿದೆ ಎಂದರು.

ಸಂಶೋಧನೆ, ತರಬೇತಿ ಹಾಗೂ ಅಧ್ಯಯನ– ಮೂರು ವಿಭಾಗಗಳಲ್ಲಿ ಸಮನ್ವಯಕ್ಕಾಗಿ ನ್ಯೂಜಿಲೆಂಡ್‌ನ ಎಂಟು ವಿಶ್ವವಿದ್ಯಾಲಯಗಳ ಜತೆಗೆ, ರಾಜ್ಯದ 10 ವಿಶ್ವವಿದ್ಯಾಲಯಗಳು ಒಪ್ಪಂದ ಮಾಡಿಕೊಂಡಿವೆ. ಅಲ್ಲದೇ, ಬಿಎಸ್ಸಿ, ಬಿಬಿಎ, ಬಿಕಾಂ ಸೇರಿದಂತೆ ಸಾಮಾನ್ಯ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಕೌಶಲ ತರಬೇತಿ ನೀಡಲು ಕ್ರಿಸ್ಪಾ ಸಂಸ್ಥೆ (ಸೆಂಟರ್‌ ಫಾರ್ ರೀಸರ್ಚ್‌ ಇನ್‌ ಸ್ಕೀಮ್ಸ್‌ ಆ್ಯಂಡ್‌ ಪಾಲಿಸಿ) ಜತೆ ಮಾತುಕತೆ ನಡೆಯುತ್ತಿದೆ. ಸಾಮಾಜಿಕ ಕಳಕಳಿಯ ಆಧಾರದಲ್ಲಿ ಎಲ್ಲ ಸಂಸ್ಥೆಗಳೂ ಸರ್ಕಾರದ ಜತೆ ಕೈಜೋಡಿಸಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.