ADVERTISEMENT

ಹರಪನಹಳ್ಳಿ | ಭಕ್ತರ ಬೆನ್ನ ಮೇಲೆ ದಲಿತ ಪೂಜಾರಿ ನಡಿಗೆ

ಅರಸೀಕೆರೆ ಗ್ರಾಮ; ದಂಡಿನ ದುರ್ಗಮ್ಮದೇವಿ ಕಾರ್ತಿಕೋತ್ಸವ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 6:30 IST
Last Updated 26 ಡಿಸೆಂಬರ್ 2022, 6:30 IST
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಭಾನುವಾರ ನಡೆದ ದಂಡಿನ ದುರ್ಗಮ್ಮ ಕಾರ್ತಿಕೋತ್ಸವದಲ್ಲಿ ದಲಿತ ಪೂಜಾರಿಗಳ ಪಾದಸ್ಪರ್ಶಕ್ಕಾಗಿ ಬೋರಲಾಗಿ ಮಲಗಿದ ಭಕ್ತರು
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಭಾನುವಾರ ನಡೆದ ದಂಡಿನ ದುರ್ಗಮ್ಮ ಕಾರ್ತಿಕೋತ್ಸವದಲ್ಲಿ ದಲಿತ ಪೂಜಾರಿಗಳ ಪಾದಸ್ಪರ್ಶಕ್ಕಾಗಿ ಬೋರಲಾಗಿ ಮಲಗಿದ ಭಕ್ತರು   

ಅರಸೀಕೆರೆ (ವಿಜಯನಗರ ಜಿಲ್ಲೆ): ಜಾತಿ, ಲಿಂಗಭೇದವಿಲ್ಲದೆಭಕ್ತರು ಇಲ್ಲಿ ಸಾಲು ಸಾಲಾಗಿ ಬೋರಲಾಗಿ ಮಲಗಿದ್ದರು. ದೇವರ ಕೇಲು (ಪೂಜಾ ಸಾಮಗ್ರಿ ಉಳ್ಳ ಮಡಿಕೆ) ಹೊತ್ತ ದಲಿತ ಪೂಜಾರಿ ಭಕ್ತರ ಬೆನ್ನ ಮೇಲೆ ಹೆಜ್ಜೆ ಹಾಕುತ್ತಿದ್ದ. ಪಾದಸ್ಪರ್ಶ ಪಡೆದ ಭಕ್ತರ ಮೊಗದಲ್ಲಿ ಕೃತಜ್ಞತಾ ಭಾವ ಕಾಣುತ್ತಿತ್ತು.

ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ದಂಡಿನ ದುರ್ಗಮ್ಮದೇವಿ ಕಡೆ ಕಾರ್ತಿಕೋತ್ಸವದ ಅಂಗವಾಗಿ ನಡೆದ ಜಾತ್ರೆಯ ಕೊನೆ ದಿನವಾದ ಭಾನುವಾರ ಮುಂಜಾನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ದೃಶ್ಯ ಕಂಡುಬಂತು.

ಬೆಳಗಿನ ಜಾವ 5ರ ಸುಮಾರಿಗೆ ದೇಗುಲದಿಂದ ದಂಡಿನ ದುರ್ಗಮ್ಮ ದೇವಿ ಉತ್ಸವ ಮೂರ್ತಿಯನ್ನು 1.5 ಕಿ.ಮೀ. ದೂರವಿರುವ ಹೊಂಡಕ್ಕೆ ಭಜನೆ, ಮಂಗಳವಾದ್ಯಗಳೊಂದಿಗೆ ಗಂಗಾ ಪೂಜೆಗೆ ದುಗ್ಗಮ್ಮನ ಕಟ್ಟೆಗೆ ಕರೆದೊಯ್ದರು. ಪೂಜೆ ಮುಗಿಸಿ ದೇವಿಯ ಕೇಲು ಹೊತ್ತ ಇಬ್ಬರು ಪೂಜಾರಿಗಳು ದಾರಿಯುದ್ದಕ್ಕೂ ಮಲಗಿದ್ದ ಭಕ್ತರ ಮೈಮೇಲೆ ನಡೆಯುತ್ತಾ ಸಾಗಿದರು. ದೇಗುಲದವರೆಗೂ ಪೂಜಾರಿಯ ಪಾದ ನೆಲಕ್ಕೆ ಸೋಕದಂತೆ ಭಕ್ತರು ಮಲಗಿದ್ದರು.

ADVERTISEMENT

ಜಾತ್ರೋತ್ಸವಕ್ಕೆ ಬರುವ ಭಕ್ತರು ಹರಕೆ ರೂಪದಲ್ಲಿ ನೀಡುವಅಕ್ಕಿ, ಹಾಲು, ಮೊಸರು ಬಳಸಿ, ಪ್ರಸಾದ ತಯಾರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ದುರ್ಗಿಯರ ಊಟ ಎನ್ನುವ ಹೆಸರಿನಲ್ಲಿ ಎಲ್ಲಾ ಸಮುದಾಯವರು ಸಹಪಂಕ್ತಿಯಲ್ಲಿ ಪ್ರಸಾದ ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.