ಬೆಳಗಾವಿ: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಸರ್ಕಾರ ಶಿಕ್ಷಕರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಆರೋಪಿಸಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೂರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ನಡೆದಿಲ್ಲ. ಈ ಸಾಲಿನಲ್ಲಿ ಆರಂಭವಾಗಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಕಾಯ್ದೆ ತಿದ್ದುಪಡಿ ಬಳಿಕವಾದರೂ ಗೊಂದಲಗಳು ಬಗೆಹರಿಯಬಹುದು ಎಂಬ ನಿರೀಕ್ಷೆಯನ್ನು ಶಿಕ್ಷಕರು ಹೊಂದಿದ್ದರು. ಈಗಅದಕ್ಕೂ ತಣ್ಣೀರೆರಚಲಾಗಿದೆ’ ಎಂದು ದೂರಿದರು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ 2017 ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಮಂಡನೆ ಆಗಿದೆ. ಆದರೆ, ಅದಿನ್ನೂ ಅಂಗೀಕಾರ ಆಗಿಲ್ಲ. ಈ ಮಸೂದೆ ವಿಧಾನಪರಿಷತ್ತಿನಲ್ಲಿ ಇನ್ನೂ ಮಂಡನೆಯೇ ಆಗಿಲ್ಲ.
‘ಈ ಮಸೂದೆಯಲ್ಲಿ ಕೆಲವೊಂದು ಲೋಪಗಳಿವೆ. ಕೌನ್ಸೆಲಿಂಗ್ ಪ್ರಕ್ರಿಯೆ ವೇಳೆ ಯಾವುದಾದರೂ ಶಾಲೆಯನ್ನು ಯಾವ ಶಿಕ್ಷಕರೂ ಆಯ್ಕೆ ಮಾಡಿಕೊಳ್ಳದಿದ್ದರೆ, ಇತರ ವಲಯದಲ್ಲಿ ಕನಿಷ್ಠ ಸೇವಾವಧಿ ಪೂರೈಸಿರುವ ಶಿಕ್ಷಕರನ್ನು ಅಲ್ಲಿಗೆ ನಿಯುಕ್ತಿಗೊಳಿಸುವ ಅಧಿಕಾರವನ್ನು ಸರ್ಕಾರವೇ ಇಟ್ಟುಕೊಳ್ಳಲಿದೆ.ಇದನ್ನು ಯಥಾವತ್ತಾಗಿ ಅಂಗೀಕರಿಸಿದರೆ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಮತ್ತೆ ಅವಕಾಶ ಕಲ್ಪಿಸಿದಂತೆ ಆಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಶೇ 20ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ವಲಯದ ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಿಲ್ಲ. ಇಂತಹ ವಲಯಗಳಲ್ಲಿನ ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕೇ, ಹೊರತು ಶಿಕ್ಷಕರ ಹಕ್ಕನ್ನು ಕಸಿದುಕೊಳ್ಳಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.