ADVERTISEMENT

ವರ್ಗಾವಣೆ ಬಲು ಜೋರು: ಹಿಂಬಡ್ತಿಗೆ ಒಳಗಾದವರಿಗೆ ಸಿಗದ ಮುಂಬಡ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:45 IST
Last Updated 12 ಜುಲೈ 2019, 19:45 IST
   

ಬೆಂಗಳೂರು: ಮೈತ್ರಿ ಸರ್ಕಾರ ಅಲ್ಪಮತದತ್ತ ಸಾಗುತ್ತಿದ್ದರೂ ಅಧಿಕಾರಿಗಳಿಗೆ ಬಡ್ತಿ ನೀಡುವುದು, ವರ್ಗಾವಣೆ ಮಾಡುವುದು ಮಾತ್ರ ನಿಂತಿಲ್ಲ. ಒಂದೆಡೆ ಸರ್ಕಾರದ ಉಳಿವಿಗೆ ಉಭಯ ಪಕ್ಷಗಳ ನಾಯಕರು ಕಸರತ್ತು ನಡೆಸಿದ್ದರೆ, ಕೆಲ ಸಚಿವರು ವರ್ಗಾವಣೆ ಮಾಡುವಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿ ಹಾಗೂ ವರ್ಗದ ಸುಮಾರು 400 ಎಂಜಿನಿಯರ್‌ಗಳು ಮುಂಬಡ್ತಿಗಾಗಿ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದರೂ ಬಡ್ತಿ ನೀಡಿಲ್ಲ. ಆದರೆ ಹೊಸದಾಗಿ ಬಡ್ತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮೈತ್ರಿ ಪಕ್ಷಗಳ ಶಾಸಕರು ರಾಜೀನಾಮೆ ನೀಡುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂತಹ ಸನ್ನಿವೇಶದಲ್ಲಿ ಬಡ್ತಿ ಹಾಗೂ ವರ್ಗಾವಣೆ ಮಾಡುತ್ತಿರುವುದು ವಿವಾದಕ್ಕೆ ಒಳಗಾಗಿದೆ.

ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸುಮಾರು 800 ಎಂಜಿನಿಯರುಗಳಿಗೆ ಬಡ್ತಿ ನೀಡುವ ಸಂಬಂಧ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕಾರ್ಯದರ್ಶಿಗೆ ಸಚಿವ ಎಚ್.ಡಿ.ರೇವಣ್ಣ ಅವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವರ್ಗಾವಣೆ ಆದೇಶ: ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯ 213 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳಿಗೆ ನಿಯೋಜಿಸಿ ಸ್ವತಂತ್ರ ಕಾರ್ಯಭಾರ ವಹಿಸಲಾಗಿದೆ. ಇಷ್ಟು ಮಂದಿ ಎಂಜಿನಿಯರ್‌ಗಳನ್ನು ವಿವಿಧ ಇಲಾಖೆ, ನಿಗಮ, ಮಂಡಳಿಗಳಿಗೆ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.