ADVERTISEMENT

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ಮೋನಿಷಾ

ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯಾದ ಮೋನಿಷಾ

ಮಂಜುಶ್ರೀ ಎಂ.ಕಡಕೋಳ
Published 5 ಜನವರಿ 2022, 20:03 IST
Last Updated 5 ಜನವರಿ 2022, 20:03 IST
ಮೋನಿಷಾ
ಮೋನಿಷಾ   

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ಮೋನಿಷಾ.

ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆಯಾಗಿರುವ ಅವರ ಬದುಕು ಅನೇಕರಿಗೆ ಸ್ಫೂರ್ತಿಯಾಗುವಂಥದ್ದು.

ಹುಟ್ಟಿದ್ದು ಗಂಡಾಗಿ, ಬೆಳೆದದ್ದು ಹೆಣ್ಣಾಗಿ. ಹೆಣ್ಣಾಗುವ ಆಸೆಯನ್ನು ಅದುಮಿಡಲಾಗದೇ ಶಾಲೆಯ ನಾಟಕಗಳಲ್ಲಿ ಸ್ತ್ರೀಪಾತ್ರ ಮಾಡಿದಾಗ ಮನೆಯವರ ತಿರಸ್ಕಾರಕ್ಕೊಳಗಾದರು.

ADVERTISEMENT

ಇಂದಲ್ಲ ನಾಳೆ ಮಗ ರಾಮು (ಮೂಲಹೆಸರು) ಸರಿಹೋದಾನು ಎಂಬ ಕುಟುಂಬದ ಭರವಸೆ ನಿಜವಾಗಲಿಲ್ಲ. ಎಸ್ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಅಪ್ಪನಿಂದ ಬೆತ್ತದೇಟಿನ ರುಚಿ ಕಂಡು ಮನೆ ಬಿಟ್ಟು ಹೊರಟ ಮೋನಿಷಾ ಸೇರಿದ್ದು ತಮ್ಮದೇ ಸಮುದಾಯದವರಿದ್ದ ಮುಂಬೈಗೆ. ಅಲ್ಲಿ ದುಡಿದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಬಳಿಕ ಬೆಂಗಳೂರಿಗೆ ಹಿಂತಿರುಗಿದಾಗ ಕುಟುಂಬದರಿಂದ ಮತ್ತೆ ತಿರಸ್ಕಾರ.

ಮಗನ ಕೊರಗಿನಲ್ಲೇ ಅಪ್ಪ ಕೊನೆಯುಸಿರೆಳೆದ ಬಳಿಕ ಕುಟುಂಬಕ್ಕೆ ಹಿಂತಿರುಗಿದಾಗ ಮತ್ತೆ ಬದುಕಿನ ತಿರುವು ಕಂಡಿದ್ದು ವ್ಯಕ್ತಿಯೊಬ್ಬರನ್ನು ಪ್ರೀತಿಸಿದಾಗ. ಸಂಗಾತಿ ಮತ್ತು ಅವರ ಕುಟುಂಬದವರ ಮರ್ಯಾದೆಗೆ ಅಂಜಿ, ಒಲಿದ ಪ್ರೀತಿ ಉಳಿಸಿಕೊಳ್ಳಲು ಮೋನಿಷಾ ಸಾಗಿದ್ದು ಸ್ವಾಭಿಮಾನದ ದುಡಿಮೆಯತ್ತ.

ಉದ್ಯೋಗಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ವಿವಿಧೆಡೆ ಅಲೆದಾಟ. ಅಂದಿನ ಜಿಲ್ಲಾಧಿಕಾರಿ ಶಂಕರ್ ಅವರ ಸಹಾಯದಿಂದ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದ ಮೋನಿಷಾ, ತಾವು ಹುಟ್ಟಿಬೆಳೆದ ಇಂದಿರಾನಗರದ ಸಮೀಪದಲ್ಲಿನ ಕೊಳೆಗೇರಿಯಲ್ಲಿ ಬಟ್ಟೆ ವ್ಯಾಪಾರ ಶುರು ಮಾಡಿದರು. ಜತೆಗೆ ಚೀಟಿ ವ್ಯವಹಾರ ನಡೆಸುತ್ತಲೇ ಕೊಳೆಗೇರಿ ಜನರ ಪ್ರೀತಿ ಗಳಿಸಿದ ಮೋನಿಷಾ ಅಲ್ಲಿನ ನಾಯಕಿಯಾಗಿ ರೂಪುಗೊಂಡರು. ಕೊಳೆಗೇರಿ ಜನರ ಅಭಿವೃದ್ಧಿಗಾಗಿ ಹೋರಾಡುತ್ತಿದ್ದ ಮೋನಿಷಾ ಕಾಂಗ್ರೆಸ್‌ ಮುಖಂಡ ರಮೇಶ್ ಅವರ ಪ್ರೋತ್ಸಾಹದಿಂದ ಇಂದಿರಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡರು. ರಾಜಕೀಯದ ನಂಟಿನ ಜೊತೆಗೆ ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಹಾಕಿದರೂ ಎಲ್ಲೆಡೆಯೂ ಗೊಂದಲಕ್ಕೆ ಕಾರಣವಾಗಿದ್ದು ‘ರಾಮು’ ಎನ್ನುವ ಹಿಂದಿನ ಹೆಸರು.

ಲಿಂಗ ಪರಿವರ್ತನೆಯಾಗಿದ್ದರೂ ಶೈಕ್ಷಣಿಕ ದಾಖಲಾತಿಗಳಲ್ಲಿ ‘ರಾಮು’ ಆಗಿದ್ದ ಮೋನಿಷಾ, ದಾಖಲಾತಿಗಳನ್ನು ಸರಿಪಡಿಸಿಕೊಂಡು ವಿಧಾನ ಪರಿಷತ್‌ನ ಸಚಿವಾಲಯದಲ್ಲಿ ‘ಡಿ’ಗ್ರೂಪ್‌ ಹುದ್ದೆಗೆ ಹಾಕಿದ ಅರ್ಜಿಯು ಫಲ ನೀಡಲಿಲ್ಲ. ಅರ್ಹತೆ ಇದ್ದರೂ ಸಂದರ್ಶನಕ್ಕೆ ಕರೆ ಬಾರದಿದ್ದಾಗ ಹೈಕೋರ್ಟ್‌ ಮುಂದೆ ಕಣ್ಣೀರು ಹಾಕುತ್ತಾ ನಿಂತಿದ್ದ ಅವರಿಗೆ ಬಂದದ್ದು ಅದೇ ಕೋರ್ಟಿನ ‘ಡಿ’ಗ್ರೂಪ್ ಮಹಿಳಾ ನೌಕರರೊಬ್ಬರು ನೆರವು ನೀಡಿದರು. ವಕೀಲರೊಬ್ಬರ ಪರಿಚಯದಿಂದ ಕಾನೂನಾತ್ಮಕವಾಗಿ ತಮ್ಮ ಹಕ್ಕು ಪ್ರತಿಪಾದಿಸಬೇಕೆಂಬ ಅರಿವು ಮೂಡಿದ್ದೇ ತಡ, ಲೈಂಗಿಕ ಅಲ್ಪಸಂಖ್ಯಾತರಿಗೂ ಸರ್ಕಾರಿ ನೌಕರಿಯಲ್ಲಿ ಮೀಸಲು ನೀಡಿ ಪರಿಗಣಿಸಬೇಕು ಎಂದು 2014ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೆರವಿಗೆ ಬಂತು. ಅದೇ ಸಮಯಕ್ಕೆ ವಿಧಾನಸಭೆಯಲ್ಲಿ ನಟಿ ತಾರಾ ಅನೂರಾಧಾ ಅವರು ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಬೇಕೆಂಬ ವಾದವೂ ಮೋನಿಷಾ ಅವರಿಗೆ ಬೆಂಬಲ ನೀಡಿತು. ವಕೀಲರಾದ ಎಚ್‌.ಆರ್. ಅನಿತಾ ಅವರ ನೆರವಿನಿಂದ ಕಾನೂನಿನಲ್ಲಿ ಜಯ ಪಡೆದ ಮೋನಿಷಾ ಅವರಿಗೆ ನೌಕರಿ ಮತ್ತೆ ಗಗನಕುಸುಮವಾಗಿತ್ತು. ಕೆಎಟಿ ನೀಡಿದ್ದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಅಂದಿನ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರ ಆದೇಶವೂ ಮೋನಿಷಾ ಅವರಿಗೆ ಸರ್ಕಾರಿ ನೌಕರಿ ದೊರೆಯುವಲ್ಲಿ ಮಹತ್ವ ಪಾತ್ರ ವಹಿಸಿತು.

ಹೈಕೋರ್ಟ್ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ ಮೋನಿಷಾ ಅವರಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಿತು. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಅದುವರೆಗೆ ಇದ್ದ ಪೂರ್ವಗ್ರಹಗಳನ್ನು ತಮ್ಮ ನಡತೆ ಮತ್ತು ಕೆಲಸದ ಮೂಲಕ ಕಿತ್ತೊಗೆದ ಮೋನಿಷಾ, ಕಚೇರಿಯಲ್ಲಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು. ಆದರೂ, ಗುತ್ತಿಗೆ ನೌಕರಿ ಎಂಬ ಚಿಂತೆ ಅವರನ್ನು ಬಿಟ್ಟಿರಲಿಲ್ಲ. ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್‌ನ ಹಂಗಾಮಿ ಸಭಾಪತಿ ಆಗಿದ್ದ ಸಮಯದಲ್ಲಿ ನೌಕರಿಯನ್ನು ಕಾಯಂಗೊಳಿಸಿಕೊಂಡ ಮೋನಿಷಾ ತಮ್ಮಂತಿರುವ ಇತರ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯಾಗಿದ್ದಾರೆ.

ಭಿಕ್ಷಾಟನೆ, ಸೆಕ್ಸ್ ವರ್ಕ್ ಇವುಗಳನ್ನು ಬಿಟ್ಟು ಉತ್ತಮ ಬದುಕು ರೂಪಿಸಿಕೊಳ್ಳಲು ಪ್ರಯತ್ನಬಿಟ್ಟಿದ್ದೇವೆಯೇ ಎಂಬುದು ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯತತ್ಪರರಾದರೆ ಯಶಸ್ಸು ಕಷ್ಟವೇನಲ್ಲ ಎಂಬುದು ಮೋನಿಷಾ ಅವರ ಅನುಭವದ ನುಡಿ. ಇಷ್ಟಪಟ್ಟಿದ್ದ ಪ್ರೀತಿ ಕೈಹಿಡಿಯಲಿಲ್ಲವಾದರೂ ವಿದ್ಯೆ ಕೈಹಿಡಿಯಿತು ಎಂಬ ನಂಬಿಕೆ ಅವರದ್ದು. ‘ಡಾ.ಬಿ.ಆರ್. ಅಂಬೇಡ್ಕರ್, ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಎಲ್. ನಾರಾಯಣ ಸ್ವಾಮಿ ಹಾಗೂ ತಮ್ಮ ಬದುಕಿಗೆ ನೆರವಿಗೆ ನಿಂತ ಧನಲಕ್ಷ್ಮೀ ಅವರು ತಮ್ಮ ಪಾಲಿನ ನಡೆದಾಡುವ ದೇವರು’ ಎನ್ನುತ್ತಾರೆ ಮೋನಿಷಾ.

ಇತ್ತೀಚೆಗಷ್ಟೇ ಪದವಿ ಕೋರ್ಸ್‌ಗೆ ಸೇರಿರುವ ಅವರು ಉನ್ನತ ಪದವಿ ಗಳಿಸಿ ವೃತ್ತಿಯಲ್ಲಿ ಬಡ್ತಿ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.