ADVERTISEMENT

ಇನ್‌ಸ್ಪೆಕ್ಟರ್‌ ಹುದ್ದೆಗೆ ಆಡಳಿತ ವಿಭಾಗದವರ ಪ್ರವೇಶ !

ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ: ನಿರುದ್ಯೋಗಿಗಳ ಒಕ್ಕೂಟ ದೂರು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 23:40 IST
Last Updated 29 ಮಾರ್ಚ್ 2025, 23:40 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಆಡಳಿತ ವಿಭಾಗದ ಹುದ್ದೆಗಳಲ್ಲಿರುವವರು (ನಾನ್‌ ಎಕ್ಸಿಕ್ಯೂಟಿವ್‌) ತರಾತುರಿಯಲ್ಲಿ ಡಿಪ್ಲೊಮಾ ಪಡೆದು ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ ಬಡ್ತಿ ಪಡೆಯುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ರಾಜಕೀಯ ಪ್ರಭಾವದಿಂದ ಈ ರೀತಿ ಮಾಡಲಾಗಿದೆ ಎಂದು ಡಿಪ್ಲೊಮಾ/ಬಿ.ಇ. ಆಟೊಮೊಬೈಲ್‌ ನಿರುದ್ಯೋಗಿ ಪದವೀಧರರ ಒಕ್ಕೂಟ ಧ್ವನಿ ಎತ್ತಿದ್ದು, ರಾಜ್ಯಪಾಲರಿಗೆ ದೂರು ನೀಡಿದೆ.

ADVERTISEMENT

ಆಡಳಿತ ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕರು, ಪ್ರಥಮದರ್ಜೆ ಸಹಾಯಕರು. ಕಚೇರಿ ಅಧೀಕ್ಷಕ, ಲೆಕ್ಕಾಧಿಕಾರಿ, ಆಡಳಿತಾಧಿಕಾರಿ... ಹೀಗೆ ಹುದ್ದೆಗಳಿರುತ್ತವೆ. ಇವುಗಳಿಗೆ ಪಿಯುಸಿ, ಡಿಗ್ರಿ ಮಾಡಿಕೊಂಡವರು ಆಯ್ಕೆಯಾಗುತ್ತಾರೆ. ಇಲ್ಲಿ ಬಡ್ತಿಯನ್ನು ಅದೇ ವಿಭಾಗದಲ್ಲಿ ನೀಡಬೇಕು. ಅನುಷ್ಠಾನ(ಎಕ್ಸಿಕ್ಯೂಟಿವ್‌) ವಿಭಾಗದಲ್ಲಿ ಮೋಟಾರು ವಾಹನ ನಿರೀಕ್ಷಕ, ಹಿರಿಯ ಮೋಟಾರು ವಾಹನ ನಿರೀಕ್ಷಕ, ಎಆರ್‌ಟಿಒ, ಆರ್‌ಟಿಒ, ಜಂಟಿ ಆಯುಕ್ತ, ಆಯುಕ್ತ ಹುದ್ದೆಗಳಿರುತ್ತವೆ. ಡಿಪ್ಲೊಮಾ/ಬಿ.ಇ. ಆಟೊಮೊಬೈಲ್‌ ಮಾಡಿಕೊಂಡವರು ದೇಹದಾರ್ಢ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ನೇಮಕ ಆಗಿರುತ್ತಾರೆ.

ಆಡಳಿತ ವಿಭಾಗದಲ್ಲಿಯೂ ಡಿಪ್ಲೊಮಾ ಮಾಡಿದವರಿದ್ದರೆ ಅವರಿಗೂ ಅನುಷ್ಠಾನ ವಿಭಾಗಕ್ಕೆ ಬರಲು ಅವಕಾಶವನ್ನು ನೀಡಿ 2022ರಲ್ಲಿ ಆದೇಶ ಹೊರಡಿಸಲಾಗಿತ್ತು. ಇದೇ ಆದೇಶವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಒಕ್ಕೂಟದ ಗುರುಪ್ರಸಾದ್‌ ಆರೋಪಿಸಿದ್ದಾರೆ.

‘ಆಡಳಿತ ವಿಭಾಗದ ಹುದ್ದೆಗಳಿಗೆ ಸೇರುವಾಗ ಅವರು ಡಿಪ್ಲೊಮಾ ಮಾಡಿರುವುದಿಲ್ಲ. ಖಾಸಗಿ ಆಟೊಮೊಬೈಲ್‌ ಕಂಪನಿಗಳಲ್ಲಿ, ಸರ್ವಿಸ್‌ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವವರು ಡಿಪ್ಲೊಮಾ ಕಲಿಯಲು ತಾಂತ್ರಿಕ ಸಂಜೆ ಕಾಲೇಜುಗಳಲ್ಲಿ ಅವಕಾಶ ಇದೆ. ಸಾರಿಗೆ ಇಲಾಖೆಯ ಆಡಳಿತ ವಿಭಾಗದಲ್ಲಿರುವವರು ಯಾವುದೋ ಖಾಸಗಿ ಕಂಪನಿಯಿಂದ ಪತ್ರ ತೆಗೆದುಕೊಂಡು ಹೋಗಿ ಸಂಜೆ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಾರೆ. ಎರಡು ವರ್ಷದಲ್ಲಿ ಡಿಪ್ಲೊಮಾ ಪ್ರಮಾಣಪತ್ರ ಪಡೆಯುತ್ತಾರೆ. ನಿಜವಾಗಿ ಡಿಪ್ಲೊಮಾ ಮಾಡುವರು ಕೋರ್ಸ್‌ ಮುಗಿಸಿ ಆಟೊಮೊಬೈಲ್‌ ಸಂಸ್ಥೆಗಳಲ್ಲಿ, ಗ್ಯಾರೇಜ್‌, ಸರ್ವಿಸ್‌ ಸೆಂಟರ್‌ಗಳಲ್ಲಿ ಒಂದು ವರ್ಷ ಕೆಲಸ ಮಾಡಬೇಕು. ಈ ನೌಕರರು ಹೇಗೆ ಪ್ರಮಾಣ ಪತ್ರ ಪಡೆಯುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ಆಡಳಿತ ವಿಭಾಗದ ಹುದ್ದೆಯಲ್ಲಿರುವ ಒಂಬತ್ತು ನೌಕರರು ಸಮವಸ್ತ್ರ ಧರಿಸುವ ಹುದ್ದೆಗಳಿಗೆ ಬಡ್ತಿ ಪಡೆದಿದ್ದಾರೆ. ಇದು ಭ್ರಷ್ಟಾಚಾರ ಮತ್ತು ರಾಜಕೀಯ ಪ್ರಭಾವದಿಂದ ಆಗಿದೆ’ ಎಂದು ಗುರುಪ್ರಸಾದ್‌ ಅವರು ರಾಜ್ಯಪಾಲರಿಗೆ, ವಿಧಾನಸಭೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.