ADVERTISEMENT

ಧೈರ್ಯದಿಂದ ಕರ್ತವ್ಯ ನಿಭಾಯಿಸಿ: ಲಕ್ಷ್ಮಣ ಸವದಿ

ಸಾರ್ವಜನಿಕರು–ಪ್ರಯಾಣಿಕರ ಅಹವಾಲು ಆಲಿಸಿದ ಸಾರಿಗೆ ಸಚಿವ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 20:18 IST
Last Updated 7 ಜೂನ್ 2020, 20:18 IST
   

ಬೆಂಗಳೂರು: ‘ಪ್ರಜಾವಾಣಿ’ ಪತ್ರಿಕೆಯು ಭಾನುವಾರ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.

* ಹಳ್ಳಿಗಳಿಂದ ಹೋಬಳಿ ಅಥವಾ ತಾಲ್ಲೂಕಿಗೆ ಹೋಗಲು ಬಸ್‌ ವ್ಯವಸ್ಥೆ ಇಲ್ಲ. ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಹಳ್ಳಿಗಳಿಗೆ ಬಸ್‌ ಸಂಚಾರ ಸೇವೆ ಆರಂಭಿಸಿ.
-ಅಭಿಲಾಷ್ ಹೊಳಲ್ಕೆರೆ, ನಾಗರಾಜ ದಾವಣಗೆರೆ, ಮಹಾಂತೇಶ ಮೂಡಲಗಿ

ಸಚಿವರು: ಈಗಾಗಲೇ ಜಿಲ್ಲಾ ಕೇಂದ್ರಗಳ ನಡುವೆ, ಜಿಲ್ಲೆ ಮತ್ತು ತಾಲ್ಲೂಕು ಹಾಗೂ ಹೋಬಳಿ ನಡುವೆ ಬಸ್‌ ಸಂಚಾರ ಆರಂಭಿಸಲಾಗಿದೆ. ಸೋಮವಾರದಿಂದ (ಜೂನ್‌ 8) ಹಳ್ಳಿಗಳಿಗೂ ಪೂರ್ಣಪ್ರಮಾಣದಲ್ಲಿ ಬಸ್‌ ಸೇವೆ ಆರಂಭವಾಗಲಿದೆ.

ADVERTISEMENT

* ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಳಿಗೆ ಹಾಕಿದ್ದೇವೆ. ಎರಡು ತಿಂಗಳಿಂದ ವ್ಯಾಪಾರ ಇಲ್ಲ. ಮಳಿಗೆ ಬಾಡಿಗೆ ಕಡಿಮೆ ಮಾಡಿದರೆ ಅನುಕೂಲವಾಗುತ್ತದೆ.
-ಅದೃಶ್ಯ ಬಾಂಡಗೆ ಚನ್ನಮ್ಮನಕಿತ್ತೂರು, ಮೇಘಾ ಬೆಳಗಾವಿ

ಸಚಿವರು: ವ್ಯಾಪಾರ ಕಡಿಮೆಯಾಗಿರುವುದು ಗಮನದಲ್ಲಿದೆ. ಈಗಾಗಲೇ ಎರಡು ತಿಂಗಳ ಬಾಡಿಗೆಯನ್ನು ತೆಗೆದುಕೊಂಡಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವವರೆಗೆ ಕಡಿಮೆ ಬಾಡಿಗೆ ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಚರ್ಚಿಸಿ, ಶೀಘ್ರವೇ ಕ್ರಮ ಕೈಗೊಂಡು ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು.

* ನಮ್ಮ ಊರಿಗೆ ಬಸ್‌ ವ್ಯವಸ್ಥೆ ಇಲ್ಲ. ಆದರೆ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಡಾಂಬರು ರಸ್ತೆ ಮಾಡಿಸಿ, ಬಸ್‌ ಸೇವೆ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ.
-ಮೋಹನ್‌ಕುಮಾರ್,ಗೌರಿಬಿದನೂರು

ಸಚಿವರು: ಸ್ಥಳೀಯ ಡಿಪೊ ಮ್ಯಾನೇಜರ್‌ಗೆ ಈ ಕುರಿತು ಲಿಖಿತ ಮನವಿ ಸಲ್ಲಿಸಿ. ಬಸ್‌ ಸೇವೆ ಪ್ರಾರಂಭಿಸಲು ನಾನು ಸೂಚನೆ ನೀಡುತ್ತೇನೆ. ಡಾಂಬರು ರಸ್ತೆ ನಿರ್ಮಾಣ ಮಾಡುವಂತೆ ಸ್ಥಳೀಯ ಶಾಸಕರಿಗೆ ಮನವಿ ಕೊಡಿ. ನಾನೂ ಶಾಸಕರ ಬಳಿ ಈ ಕುರಿತು ಮಾತನಾಡುತ್ತೇನೆ.

* ಕಿರುಸಾಲ ನೀಡುವ ಬ್ಯಾಂಕ್‌ಗಳಿಗೆ ಸಾಲದ ಅಥವಾ ಬಡ್ಡಿಯ ಕಂತು ಮೂರು ತಿಂಗಳು ತೆಗೆದುಕೊಳ್ಳಬೇಡಿ ಎಂದು ಸರ್ಕಾರ ಹೇಳಿದ್ದರೂ, ಕಂತು ಪಾವತಿಸುವಂತೆ ಬ್ಯಾಂಕ್‌ಗಳು ಒತ್ತಡ ಹೇರುತ್ತಿವೆ.
-ಗಿರಿಧರ, ತುಮಕೂರು

ಸಚಿವ: ಸಾಲ, ಬಡ್ಡಿ ಅಥವಾ ಕಂತು ಪಾವತಿಸುವಂತೆ ಯಾವುದೇ ಫೈನಾನ್ಸ್‌ ಸಂಸ್ಥೆ ಅಥವಾ ಬ್ಯಾಂಕ್‌ಗಳು ಒತ್ತಡ ಹೇರುವಂತಿಲ್ಲ. ನೀವು ಲಿಖಿತವಾಗಿ ದೂರು ನೀಡಿದರೆ, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

* ನನ್ನ ಊರು ಮಂಡ್ಯ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬಿಸಿನೆಸ್‌ಗಾಗಿ ಓಡಾಡುತ್ತೇನೆ. ಇಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆ ಹೆಚ್ಚಾಗಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳ ಸೇವೆ ಆರಂಭಿಸಿ.
-ಪ್ರಶಾಂತ್ ಮಂಡ್ಯ

ಸಚಿವರು: ನಿರ್ದಿಷ್ಟ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುವಂತೆ ಖಾಸಗಿ ಬಸ್‌ಗಳಿಗೆ ಪರವಾನಗಿ ಕೊಟ್ಟಿರುತ್ತೇವೆ. ಅವರು ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ ನಿರ್ದಿಷ್ಟ ತೆರಿಗೆ ಕಟ್ಟುತ್ತಿರುತ್ತಾರೆ. ಖಾಸಗಿ ಬಸ್‌ಗಳಿಂದ ನಿಮಗೆ ಏನಾದರೂ ತೊಂದರೆಯಾಗಿದ್ದರೆ ಮಾತ್ರ ಲಿಖಿತವಾಗಿ ದೂರು ನೀಡಿ. ಕ್ರಮ ಕೈಗೊಳ್ಳುತ್ತೇವೆ.

* ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಕೆಲವು ಚಾಲಕರು ಮತ್ತು ನಿರ್ವಾಹಕರು ಆತಂಕದಲ್ಲಿದ್ದಾರೆ. ಅವರಿಗೆ ಏನು ಹೇಳಲು ಬಯಸುತ್ತೀರಿ.
-ಗೋಪಾಲ್ ಶಿರಗುಪ್ಪ, ಬಳ್ಳಾರಿ

ಸಚಿವರು: ಆತಂಕವಿರುವುದು ಸಹಜ. ಆದರೆ, ಈ ಸಂದರ್ಭದಲ್ಲಿ ಎಲ್ಲರಂತೆ ನಾವು ಮನೆಯಲ್ಲಿಯೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಾರಿಗೆ ಸಚಿವನಾಗಿ ನಾನು ಮತ್ತು ಸಂಸ್ಥೆಯ ಸಿಬ್ಬಂದಿ ಯಾರೇ ಆಗಲಿ ಕೆಲಸ ಮಾಡಲೇಬೇಕು. ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮೆಲ್ಲರ ಕರ್ತವ್ಯ. ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಯ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಧೈರ್ಯದಿಂದ ಕೆಲಸ ಮಾಡಬೇಕು.

* ಜಗಳೂರು ಬಳಿಯ ಗೌರಿಪುರ, ಕ್ಯಾತನಹಳ್ಳಿಗೆ ಬಸ್‌ ಸೌಲಭ್ಯ ಇಲ್ಲ. ಜಗಳೂರು–ಕೊಟ್ಟೂರು ಮಾರ್ಗವಾಗಿ ಚಲಿಸುವ ಬಸ್‌ಗಳನ್ನು ನಮ್ಮ ಊರಿನ ಮೂಲಕ ಸಾಗುವಂತೆ ಮಾಡಬೇಕು.
-ನಾಗರಾಜ್‌ ಗೌರಿಪುರ, ರಮೇಶ್‌ ಕ್ಯಾತನಹಳ್ಳಿ

ಸಚಿವರು: ಪ್ರಯಾಣಿಕರ ಸಂಖ್ಯೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಡಿಪೊ ಮ್ಯಾನೇಜರ್‌ಗೆ ಲಿಖಿತ ಮನವಿ ಕೊಡಿ. ಮುಂದಿನ ಕ್ರಮ ಕೈಗೊಳ್ಳಲು ಅವರಿಗೆ ಸೂಚನೆ ನೀಡುತ್ತೇನೆ.

* ಪ್ರಯಾಣಿಕರಿಲ್ಲದೆ ತುಂಬಾ ನಷ್ಟವಾಗಿದೆ. ಒಂದು ಖಾಸಗಿ ಬಸ್‌ನಿಂದ ವರ್ಷಕ್ಕೆ ₹1ಲಕ್ಷ ತೆರಿಗೆಯನ್ನು ನಾವು ಸರ್ಕಾರಕ್ಕೆ ಕಟ್ಟುತ್ತಿದ್ದೇವೆ. ಈ ಸಂದರ್ಭದಲ್ಲಿ ಸರ್ಕಾರ ಖಾಸಗಿ ಬಸ್‌ಗಳಿಗೆ ತಲಾ ₹1ಲಕ್ಷ ಅನುದಾನ ನೀಡಿದರೆ ಅನುಕೂಲವಾಗುತ್ತದೆ.
-ಚಂದ್ರಶೇಖರ್ ತರೀಕೆರೆ, ಚಿಕ್ಕಮಗಳೂರು

ಸಚಿವರು: ಲಾಕ್‌ಡೌನ್ ಸಂದರ್ಭದಲ್ಲಿ ಎರಡು ತಿಂಗಳ ತೆರಿಗೆಯನ್ನು ಸರ್ಕಾರ ತೆಗೆದುಕೊಂಡಿಲ್ಲ. ಶೇ 50ಕ್ಕಿಂತ ಕಡಿಮೆ ಪ್ರಯಾಣಿಕರು ಈಗ ಓಡಾಡುತ್ತಾರೆ ಎಂಬ ಕಾರಣಕ್ಕೆ ಶೇ 50ರಷ್ಟು ಮಾತ್ರ ತೆರಿಗೆ ಕಟ್ಟಲು ಹೇಳಿದ್ದೇವೆ. ಬಸ್‌ಗಳಿಗೆ ತಲಾ ₹1ಲಕ್ಷ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡುತ್ತೇನೆ.

* ಒಂದೊಂದು ನಿಗಮಕ್ಕೆ ಒಬ್ಬೊಬ್ಬರು ನಿರ್ದೇಶಕರು, ವ್ಯವಸ್ಥಾಪಕರು ನಿರ್ದೇಶಕರು ಇರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಎನಿಸುತ್ತದೆ. ನಾಲ್ಕು ನಿಗಮಗಳನ್ನು ಒಂದುಗೂಡಿಸಿ,ಅಧಿಕಾರಿಗಳ ಸಂಖ್ಯೆ ಕಡಿಮೆ ಮಾಡಬೇಕು.
-ಲಕ್ಕಪ್ಪ, ಬನಶಂಕರಿ

ಸಚಿವರು: ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಕುರಿತು ಚಿಂತಿಸಲಾಗುವುದು

* ಅರಸೀಕೆರೆಯಿಂದ ಶೆಟ್ಟಿಹಳ್ಳಿಗೆ ಬಹಳಷ್ಟು ಮಹಿಳೆಯರು ಗಾರ್ಮೆಂಟ್ಸ್ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಾರೆ. ಆದರೆ ಬಸ್‌ ವ್ಯವಸ್ಥೆ ಇಲ್ಲ. ಈ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ.
-ಮಲ್ಲಿಕಾರ್ಜುನ, ಕಡೂರು

ಸಚಿವರು: ಸ್ಥಳೀಯ ಡಿಪೊ ಮ್ಯಾನೇಜರ್‌ಗೆ ಲಿಖಿತ ಮನವಿ ನೀಡಲು ಗಾರ್ಮೆಂಟ್ಸ್‌ ಕಾರ್ಖಾನೆಗೆ ಮಾಲೀಕರಿಗೆ ಹೇಳಿ. ಖಂಡಿತ ಈ ಬೇಡಿಕೆ ಈಡೇರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.