ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ 12 ದಿನ ಪೂರೈಸಿದೆ. ಹೋರಾಟದ ನಡುವೆಯೇ ಭಾನುವಾರ ನಾಲ್ಕೂ ನಿಗಮಗಳ ಸುಮಾರು 7,500 ಬಸ್‌ಗಳು ಸಂಚಾರ ನಡೆಸಿವೆ.
ದಿನದಿಂದ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಹೆಚ್ಚುತ್ತಿದೆ. ನಾಲ್ಕೂ ನಿಗಮಗಳಲ್ಲಿ ಒಟ್ಟು 1,000 ಕ್ಕೂ ಹೆಚ್ಚು ನೌಕರರು ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ನಿಗದಿಯಾಗಿದ್ದ ಟ್ರಿಪ್‌ಗಳ ಪೈಕಿ ಶೇಕಡ 50ರಷ್ಟನ್ನು ಪೂರ್ಣಗೊಳಿಸಿದೆ. ಬಿಎಂಟಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆಗಳ ಒಟ್ಟು ನಿಗದಿತ ಟ್ರಿಪ್‌ಗಳ ಪೈಕಿ ಶೇ 40ರಷ್ಟು ಬಸ್‌ಗಳ ಸಂಚಾರ ನಡೆದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮತ್ತಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಕೆಲವು ನೌಕರರು ತಾವು ಕೆಲಸಕ್ಕೆ ಹಾಜರಾಗದಂತೆ ಒತ್ತಡ, ಬೆದರಿಕೆ ಇದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕರ್ತವ್ಯಕ್ಕೆ ಹಾಜರಾದರೆ ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಷ್ಕರದಲ್ಲಿ ಪಾಲ್ಗೊಂಡಿದ್ದ 2,443 ನೌಕರರನ್ನು ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಲಾಗಿತ್ತು.
‘ಸೋಮವಾರ ಮಧ್ಯಾಹ್ನದವರೆಗೂ ಕಾದು ನೋಡಲಾಗುವುದು. ಆ ಬಳಿಕವೂ ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.
ಮತ್ತಷ್ಟು ಬಸ್‌ಗಳಿಗೆ ಹಾನಿ: ಮುಷ್ಕರದ ನಡುವೆಯೂ ಸಂಚರಿಸುತ್ತಿರುವ ಸರ್ಕಾರಿ ಬಸ್‌ಗಳಿಗೆ ಹಾನಿ ಉಂಟುಮಾಡುತ್ತಿರುವ ಪ್ರಕರಣಗಳೂ ಮುಂದುವರಿದಿವೆ. ಮುಷ್ಕರ ಆರಂಭವಾದ ದಿನದಿಂದ ಭಾನುವಾರ ಸಂಜೆಯವರೆಗೆ 105 ಬಸ್‌ಗಳಿಗೆ ಹಾನಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಬಸ್‌ಗಳಿಗೆ ಹಾನಿ ಉಂಟುಮಾಡಿದ ಆರೋಪದಡಿ 394 ಜನರ ವಿರುದ್ಧ 176 ಎಫ್‌ಐಆರ್‌ಗಳನ್ನು ದಾಖಲಿಸಲಾ
ಗಿದೆ. ಈವರೆಗೆ 88 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಸ್ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವವರು ಮತ್ತು ಕರ್ತವ್ಯಕ್ಕೆ ಹಾಜರಾಗದಂತೆ ನೌಕರರ ಮೇಲೆ ಒತ್ತಡ ಹೇರುತ್ತಿರುವವರ ವಿರುದ್ಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿಯಲ್ಲಿ ಪ್ರಕರಣ ದಾಖಲಿಸುವುದೂ ಮುಂದುವರಿದಿದೆ. ಭಾನುವಾರ ಸಂಜೆಯವರೆಗೆ 207 ನೌಕರರ ವಿರುದ್ಧ 43 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಈ ಪೈಕಿ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಉಪವಾಸ ಸತ್ಯಾಗ್ರಹ
‘ಸಾರಿಗೆ ನಿಗಮಗಳ ನೌಕರರ ಬೇಡಿಕೆ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ. ಈ ಧೋರಣೆಯನ್ನು ಖಂಡಿಸಿ ಸೋಮವಾರ ರಾಜ್ಯದಾದ್ಯಂತ ಸಾರಿಗೆ ನಿಗಮಗಳ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ’ ಎಂದು ರಾಜ್ಯ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರ ಬೆಳಿಗ್ಗೆ ಬೆಂಗಳೂರಿನ ಆನಂದರಾವ್ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅದೇ ರೀತಿ ರಾಜ್ಯದ ಹಲವು ಕಡೆಗಳಲ್ಲಿ ಸಾರಿಗೆ ನೌಕರರು ಗಾಂಧಿ ಪ್ರತಿಮೆಗಳ ಬಳಿಯಲ್ಲೇ ಉಪವಾಸ ಸತ್ಯಾಗ್ರಹ ನಡೆಸುತ್ತಾರೆ’ ಎಂದರು.
ಸಾರಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮಾತುಕತೆ ನಡೆಸಬೇಕಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಉಳಿದ ಸಚಿವರು ಮಾತುಕತೆ ನಡೆಸಬಹುದಿತ್ತು. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳ ಕುರಿತು ತಿರಸ್ಕಾರದ ಭಾವನೆ ಹೊಂದಿದೆ. ಸೋಮವಾರದಿಂದ ಹೋರಾಟ ತೀವ್ರ ಸ್ವರೂಪ ಪಡೆಯಲಿದ್ದು, ಜೈಲ್ ಭರೋ ಚಳವಳಿಗೂ ನೌಕರರು ಸಜ್ಜಾಗಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.