ADVERTISEMENT

ಬಸ್‌ನಲ್ಲಿ ಸೈಕಲ್‌ ಜತೆ ಪ್ರಯಾಣಿಸಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 7:20 IST
Last Updated 15 ಆಗಸ್ಟ್ 2020, 7:20 IST
ಬಿಎಂಟಿಸಿ ಬಸ್ ಮುಂಭಾಗದಲ್ಲಿ ಅಳವಡಿಸಿರುವ ಸೈಕಲ್ ರ್‍ಯಾಕ್
ಬಿಎಂಟಿಸಿ ಬಸ್ ಮುಂಭಾಗದಲ್ಲಿ ಅಳವಡಿಸಿರುವ ಸೈಕಲ್ ರ್‍ಯಾಕ್   

ರಾಯಚೂರು: ‘ಸರ್ಕಾರಿ ಬಸ್‌ನಲ್ಲಿ ಸೈಕಲ್ ಇಟ್ಟುಕೊಂಡು ಪ್ರಯಾಣಿಸುವ ಹೊಸ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿ ಮಾಡಲಾಗುತ್ತಿದೆ. ಈಗಾಗಲೇ ವಿದೇಶಗಳಲ್ಲಿ ವ್ಯಾಪಕವಾಗಿದೆ’ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ‍ಪ್ರಾರಂಭಿಸಲಾಗುತ್ತಿದೆ. ಅದರ ಯಶಸ್ಸನ್ನು ಅವಲೋಕಿಸಿ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸುವ ಯೋಜನೆ ಇದೆ. ಸದ್ಯಕ್ಕೆ ನಾಲ್ಕು ಸೈಕಲ್‌ ಇರಿಸಲು ಬಸ್‌ಗಳಲ್ಲಿ ಸ್ಥಳಾವಕಾಶ ಮಾಡಲಾಗುವುದು. ಇದೇ ಬಸ್‌ಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಸೈಕಲ್‌ ಇಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಅತಿಹೆಚ್ಚು ನಷ್ಟ: ‘ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಸಾರಿಗೆ ಇಲಾಖೆಗೆ ಅತಿಹೆಚ್ಚು ₹2,760 ಕೋಟಿ ನಷ್ಟವಾಗಿದೆ. ಪ್ರತಿ ತಿಂಗಳು ನಾಲ್ಕು ವಿಭಾಗಗಳ 1.3 ಲಕ್ಷ ಸಿಬ್ಬಂದಿಗೆ ₹326 ಕೋಟಿ ವೇತನ ಪಾವತಿ ಆಗುತ್ತಿದೆ. ಒಟ್ಟು ಆರು ತಿಂಗಳುಗಳ ವೇತನವನ್ನು ಸರ್ಕಾರದಿಂದಲೇ ಭರಿಸಲು ಕೋರಲಾಗಿದೆ. ಈಗಾಗಲೇ ಸರ್ಕಾರ ಎರಡು ತಿಂಗಳುಗಳ ವೇತನ ಸಂಪೂರ್ಣ ನೀಡಿದೆ. ಮುಂದಿನ ನಾಲ್ಕು ತಿಂಗಳು ಶೇ 75 ರಷ್ಟು ಸರ್ಕಾರದಿಂದ ಶೇ 25 ರಷ್ಟು ಇಲಾಖೆಯಿಂದ ವೇತನ ಕೊಡಲಾಗುವುದು. ಬೇರೆ ರಾಜ್ಯಗಳಲ್ಲಿ ಸಾರಿಗೆ ನೌಕರರ ವೇತನ ಕಡಿತ ಮಾಡಿದ್ದಾರೆ. ಆದರೆ, ಸಾರಿಗೆ ಇಲಾಖೆಯ ಸೇವಾ ಬದ್ಧತೆ ಆಧರಿಸಿ ರಾಜ್ಯದಲ್ಲಿ ವೇತನ ಕಡಿತಗೊಳಿಸಿಲ್ಲ' ಎಂದು ಹೇಳಿದರು.

‘ಎಷ್ಟೇ ನಷ್ಟ ಉಂಟಾದರೂ ಲೆಕ್ಕಿಸದೆ ಸಾರ್ವಜನಿಕರ ಸೇವಾ ಬದ್ಧತೆ ಇಟ್ಟುಕೊಂಡು ಕೋವಿಡ್‌ ನಿರ್ವಹಣೆಗಾಗಿ ಬಸ್‌ಗಳನ್ನು ಉಚಿತವಾಗಿ ಓಡಿಸಲಾಗಿದೆ. ಬೇರೆ ರಾಜ್ಯಗಳಿಗೆ ಇನ್ನೂ ಬಸ್‌ ಸಂಚಾರ ಆರಂಭಿಸಿಲ್ಲ’ ಎಂದರು.

‘ನಷ್ಟ ಕಡಿಮೆ ಮಾಡಿಕೊಳ್ಳುವ ಭಾಗವಾಗಿ ಸಾರಿಗೆ ಇಲಾಖೆಯಿಂದಲೇ ಅಚ್ಚುಕಟ್ಟಾಗಿ, ವೇಗವಾಗಿ ತಲುಪಿಸಲು ಸಾಧ್ಯವಾಗುವಂತೆ ಕೋರಿಯರ್‌ ವ್ಯವಸ್ಥೆ ಪ್ರಾರಂಭಿಸಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.