ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಚಂದಾದಾರರು ಹಾಗೂ ಅವರ ಕುಟುಂಬದವರು ಆಯುಷ್ಮಾನ್ ಆರೋಗ್ಯ ಯೋಜನೆಯಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದು ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪ್ರತಿಯೊಂದು ಜಿಲ್ಲೆಯಲ್ಲೂ ಇಎಸ್‌ಐಸಿ ಆಸ್ಪತ್ರೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದರೂ, ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ, ಆಯುಷ್ಮಾನ್ ಯೋಜನೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಇಎಸ್‌ಐಸಿ ಚಂದಾದಾರರು ನಗದುರಹಿತವಾಗಿ ಚಿಕಿತ್ಸೆ ಪಡೆಯಬಹುದು. ಅದರ ವೆಚ್ಚವನ್ನು ಇಎಸ್ಐಸಿ ಭರಿಸಲಿದೆ. ಈ ಬಗ್ಗೆ ಶೀಘ್ರವೇ, ನಿಯಮಗಳಲ್ಲಿ ಬದಲಾವಣೆ ಮಾಡಿ, ಆದೇಶ ಹೊರಡಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
‘ಬ್ರಿಟಿಷರ ಕಾಲದ ಕಾರ್ಮಿಕ ಕಾಯ್ದೆಯನ್ನು ಸುಧಾರಿತ ಕೋಡ್‌ಗಳಾಗಿ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಅನುಮಾನಗಳನ್ನು ಬಗೆಹರಿಸಲಾಗುತ್ತಿದೆ. ಕೆಲವು ರಾಜ್ಯದಲ್ಲಿ ಕೆಲವು ಕೋಡ್‌ಗಳು ಜಾರಿಯಾಗಿವೆ. ಮುಂದಿನ ಬಜೆಟ್ ಮಂಡನೆಗೆ ಮುನ್ನ ಹೊಸ ‘ಲೇಬರ್ ಕೋಡ್’ ಎಲ್ಲೆಡೆ ಜಾರಿಗೆ ಬರುತ್ತದೆ’ ಎಂದು ಹೇಳಿದರು.
‘ದೇಶದ ಒಟ್ಟಾರೆ ಉದ್ಯೋಗಿಗಳಲ್ಲಿ ಶೇ 10 ರಷ್ಟು ಜನರು ಮಾತ್ರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸೌಲಭ್ಯ ಹೊಂದಿದ್ದಾರೆ. ಉಳಿದ ಶೇ 90ರಷ್ಟು ಜನರಿಗೆ ಯಾವುದೇ ಸೌಲಭ್ಯವಿಲ್ಲ. ಇವರಿಗೆಲ್ಲ ಸಾಮಾಜಿಕ ಭದ್ರತೆ ಕಲ್ಪಿಸಬೇಕಿದೆ. ಹೀಗಾಗಿ, ಸುಧಾರಿತ ಕಾನೂನು ತರಲಾಗುತ್ತಿದೆ. ಉದ್ಯೋಗಿಗಳನ್ನು ಅರಿಯಲು ‘ಇ–ಶ್ರಮ್’ ಪೋರ್ಟಲ್ ಆರಂಭಿಸಲಾಗಿದೆ. ಸುಮಾರು 80 ಕೋಟಿ ಉದ್ಯೋಗಿಗಳಲ್ಲಿ 60 ಕೋಟಿ ಉದ್ಯೋಗಿಗಳು ಅಸಂಘಟಿತ ವಲಯದಲ್ಲಿದ್ದಾರೆ. ₹30 ಕೋಟಿ ಉದ್ಯೋಗಿಗಳು ಮಾತ್ರ ನೋಂದಣಿ ಮಾಡಿಕೊಂಡಿದ್ಧಾರೆ. ಸುಮಾರು 75 ಲಕ್ಷ ಗಿಗ್ ಕಾರ್ಮಿಕರಲ್ಲಿ 53.74 ಲಕ್ಷ ಜನರು ನೋಂದಣಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ದೇಶದ ಜಿಡಿಪಿಗೆ ಶೇ 30ರಷ್ಟು ಕೊಡುಗೆ ನೀಡುತ್ತಿರುವ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ಸಮೀಕ್ಷೆ ನಡೆದಿದೆ. 6.36 ಕೋಟಿ ಎಂಎಸ್‌ಎಂಇಗಳು 26 ಕೋಟಿ ಜನರಿಗೆ ಉದ್ಯೋಗ ನೀಡಿವೆ. ಇನ್ನೂ ಸುಮಾರು 40 ಲಕ್ಷ ಎಂಎಸ್‌ಎಂಇಗಳು ಟಯರ್–2, ಟಯರ್–3 ಪ್ರದೇಶಗಳಲ್ಲಿದ್ದು, ನೋಂದಣಿಯಾಗಿಲ್ಲ’ ಎಂದರು.
‘ದೇಶ ಸೇರಿದಂತೆ ವಿದೇಶಗಳ ಕಂಪನಿಗಳಿಗೆ ಕೌಶಲಯುತ ಉದ್ಯೋಗಿಗಳ ಅಗತ್ಯವಿದೆ. ಹೀಗಾಗಿ, ರಾಜ್ಯ ಸರ್ಕಾರ ಪೀಣ್ಯದಲ್ಲಿ ನೀಡಿರುವ ಭೂಮಿಯಲ್ಲಿ ಎನ್‌ಎಸ್‌ಐಸಿ ತಾಂತ್ರಿಕ ಸೇವಾ ಕೇಂದ್ರ (ಎನ್‌ಟಿಎಸ್‌ಸಿ) ಸ್ಥಾಪಿಸಲಾಗುತ್ತದೆ. ಮುಂದಿನ ತಲೆಮಾರಿನ ಎಐ, ಏರೊನಾಟಿಕ್ಸ್ ಸೇರಿದಂತೆ ಅತ್ಯುನ್ನತ ತಂತ್ರಜ್ಞಾನದ ಕೌಶಲಯುತ ತರಬೇತಿ ನೀಡಲಾಗುತ್ತದೆ. ದೆಹಲಿಯಲ್ಲಿರುವ ಕೇಂದ್ರಕ್ಕಿಂತ ಉನ್ನತಮಟ್ಟದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.
‘ಎಂಎಸ್‌ಎಂಇಗಳಿಗೆ ಕೇಂದ್ರ ಸರ್ಕಾರ ನೇರವಾಗಿ ಸೌಲಭ್ಯ ಕಲ್ಪಿಸುತ್ತಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ರಾಜ್ಯಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಎಂಎಸ್‌ಎಂಇ ಸಚಿವರನ್ನು ಇವತ್ತೇ ನಾನು ಭೇಟಿಯಾಗಿದ್ದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
7.1 ಕೋಟಿ ಜನರಿಗೆ ಉದ್ಯೋಗ
‘ದೇಶದಲ್ಲಿ 2017ರಿಂದ ಈವರೆಗೆ 7.1 ಕೋಟಿ ಜನರಿಗೆ ಉದ್ಯೋಗ ಲಭ್ಯವಾಗಿದೆ. ಇಪಿಎಫ್‌ಒ ಸೌಲಭ್ಯ ಹೊಂದಿರುವವರ ಸಂಖ್ಯೆ ಇದಾಗಿದ್ದು ಇತರೆ ವರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಲಭಿಸಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ‘ಜೂನ್ 9ಕ್ಕೆ ಸಚಿವೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು ನನ್ನ ಇಲಾಖೆಯಲ್ಲಿ ಹಲವು ರೀತಿಯ ಪ್ರಗತಿಯಾಗಿದೆ’ ಎಂದರು. ‘ಉದ್ಯೋಗಿಗಳ ಹೊರತಾಗಿ ಎಲ್ಲ ನಾಗರಿಕರೂ ಇಪಿಎಫ್‌ಒ ಸೌಲಭ್ಯ ಪಡೆದುಕೊಳ್ಳಬಹುದು. ಮಾಸಿಕವಾಗಿ ಹಣ ಕಟ್ಟುವ ವ್ಯವಸ್ಥೆಯನ್ನೂ ಶೀಘ್ರ ಜಾರಿಗೆ ತರಲಾಗುತ್ತದೆ’ ಎಂದು ತಿಳಿಸಿದರು. ‘ವಿದೇಶದಲ್ಲಿ ಕೆಲಸಕ್ಕಾಗಿ ಹಣ ನೀಡಿ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಯಾರನ್ನೋ ನಂಬುವುದು ಬೇಡ. ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ನೋಂದಾಯಿತ ಕಂಪನಿಗಳ ಮೂಲಕ ವ್ಯವಹರಿಸಬೇಕು. ಯಾವುದೋ ಕಂಪನಿಯನ್ನು ನಂಬಿ ವಂಚನೆಗೆ ಒಳಗಾಗಬಾರದು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.