ADVERTISEMENT

ಬೆಲೆ ಬಾಳುವ ಮರಗಳ ರಕ್ಷಣೆಗೆ ಚಿಪ್‌

ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಳಕೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:13 IST
Last Updated 4 ನವೆಂಬರ್ 2018, 19:13 IST

ಬೆಂಗಳೂರು: ದಕ್ಷಿಣದ ಮೂರು ರಾಜ್ಯಗಳಲ್ಲಿ ಟಿಂಬರ್‌ ಮಾಫಿಯಾ ಮತ್ತು ಕಳ್ಳ ಸಾಗಣೆದಾರರಿಂದ ಅಮೂಲ್ಯ ಮರಗಳನ್ನು ರಕ್ಷಿಸಲು ಆಧುನಿಕ ತಂತ್ರಜ್ಞಾನ ಬಳಸಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರು ಮುಂದಾಗಿದ್ದಾರೆ.

ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿರುವ ಶ್ರೀಗಂಧ, ರಕ್ತ ಚಂದನ, ಬೀಟೆ ಮೊದಲಾದ ಬೆಲೆ ಬಾಳುವ ಮರಗಳನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲು ಬೆಂಗಳೂರಿನ ‘ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ ವಿಜ್ಞಾನಿಗಳು ಸೆನ್ಸರ್‌ ಹೊಂದಿದ ವಿಶೇಷ ಮೈಕ್ರೊ ಚಿಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಚಿಪ್‌ಗಳನ್ನು ಮರಗಳ ಒಳಗೆ ಅಳವಡಿಸಲಾಗುವುದು. ಮರ ಕಡಿಯುವ ಸಣ್ಣ ಸುಳಿವು ಸಿಕ್ಕರೆ ಸಾಕು, ಸೆನ್ಸರ್‌ ಹೊಂದಿದ ಚಿಪ್‌ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾ ಮರಗಳ ಮಾಲೀಕರಿಗೆ ಎಚ್ಚರಿಕೆ ನೀಡುತ್ತದೆ.

ADVERTISEMENT

ಅಷ್ಟೇ ಅಲ್ಲ, ಗಾಳಿ– ಮಳೆಗೆ ಮರ ಉರುಳಿ ಹೋಗುವ ಸಾಧ್ಯತೆ ಬಗ್ಗೆಯೂ ಮಾಹಿತಿ ರವಾನಿಸುತ್ತದೆ. ಮಲ್ಲೇಶ್ವರದಲ್ಲಿರುವ ‘ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ ಹಾಗೂ ನೆಲಮಂಗಲದ ಆಗ್ರೊ ಫಾರೆಸ್ಟ್ರಿ ಫಾರಂನಲ್ಲಿ ಈ ಚಿಪ್‌ಗಳ ಕಾರ್ಯಕ್ಷಮತೆಯ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ಈಗಾಗಲೇ ಮೂರು ರಾಜ್ಯಗಳಲ್ಲಿ ರೈತರು ಬೆಳೆಸಿರುವ ಅಮೂಲ್ಯ ಮರಗಳಿಗೆ ಈ ಚಿಪ್‌ಗಳನ್ನು ಅಳವಡಿಸಲು ತಯಾರಿ ನಡೆಸಲಾಗಿದೆ. ‘ಆದಷ್ಟು ಬೇಗ ಮರಗಳಿಗೆ ಸೆನ್ಸರ್‌ ಮಾದರಿಯ ಚಿಪ್‌ಗಳನ್ನು ಅಳವಡಿಸುತ್ತೇವೆ’ ಎಂದು ಮರ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಸ್ಥೆ ನಿರ್ದೇಶಕ ಸುರೇಂದ್ರ ಕುಮಾರ್‌ ತಿಳಿಸಿದರು.

‘ಕಳೆದ ವರ್ಷ ಹಿಟಾಚಿ ಇಂಡಿಯಾ ಕಂಪನಿ ಜತೆ ಸೇರಿ ಸೆನ್ಸರ್ ಆಧಾರಿತ ಚಿಪ್‌ಗಳು ಮತ್ತು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಕ್ಯಾಂಪಸ್‌ನಲ್ಲಿ 50 ಗಂಧದ ಮರಗಳಿಗೆ ಚಿಪ್‌ ಅಳವಡಿಸಿ ಪ್ರಯೋಗ ನಡೆಸಲಾಯಿತು. ನೆಲಮಂಗಲದಲ್ಲಿ ಸಣ್ಣ– ಪುಟ್ಟ ಮಾರ್ಪಾಡುಗಳೊಂದಿಗೆ ಆರು ತಿಂಗಳ ಕಾಲ ಅಧ್ಯಯನ ನಡೆಸಲಾಯಿತು’ ಎಂದರು.

‘ಚಿಪ್‌ಗಳಿಗೆ ಅಳವಡಿಸುವ ಬ್ಯಾಟರಿಯ ಕಾರ್ಯಕ್ಷಮತೆಯನ್ನೂ ಸುಧಾರಣೆಗೊಳಿಸಲಾಗಿದೆ. ಅದು 13ರಿಂದ 14 ತಿಂಗಳ ಅವಧಿ ಕಾರ್ಯ ನಿರ್ವಹಿಸುತ್ತದೆ. ಈಗ ಅದು 8 ತಿಂಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಆರಂಭದಲ್ಲಿ ಚಿಪ್‌ ಗಾತ್ರ ದೊಡ್ಡದಿತ್ತು. ಅದನ್ನು ಮರು ವಿನ್ಯಾಸಗೊಳಿಸಿ ಗಾತ್ರವನ್ನು ಕಿರಿದಾಗಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ಎಲ್ಲೆಲ್ಲಿ ಅಳವಡಿಕೆ?

ರಾಜ್ಯದ ಹೊನ್ನಾವರ ಮತ್ತು ಯಲ್ಲಾಪುರ ಅರಣ್ಯ ಉಪವಿಭಾಗಗಳ ಅರಣ್ಯಗಳಲ್ಲಿ ಈಗಾಗಲೇ ಚಿಪ್‌ಗಳನ್ನು ಅಳವಡಿಸಿ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಶ್ರೀಗಂಧದ ಮರಗಳಿಗೆ ಚಿಪ್‌ಗಳನ್ನು ಅಳವಡಿಸಲು ಅರಣ್ಯಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ಜಿಲ್ಲೆಗಳಾದ ಕಡಪ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ರಕ್ತ ಚಂದನದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿನ ಅರಣ್ಯಗಳಲ್ಲಿ ಚಿಪ್‌ಗಳನ್ನು ಅಳವಡಿಸಲಾಗುವುದು. ಇಲ್ಲಿನ ಕಾಡುಗಳಲ್ಲಿ ಮರ ಕಳ್ಳಸಾಗಣೆದಾರರ ಕಾಟ ವಿಪರೀತ ಎಂದು ಸುರೇಂದ್ರ ಕುಮಾರ್‌ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.