ADVERTISEMENT

ದಕ್ಷಿಣ ಆಫ್ರಿಕಾ ಜೈಲಿನಲ್ಲಿ ಹಕ್ಕಿಪಿಕ್ಕಿಗಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 18:45 IST
Last Updated 6 ಅಕ್ಟೋಬರ್ 2018, 18:45 IST

ಹುಣಸೂರು: ವೀಸಾ ಅವಧಿ ಮುಗಿದಿದ್ದರೂ ಅಧಿಕಾರಿಗಳಿಗೆ ಲಂಚ ನೀಡಿ ಉಳಿದುಕೊಳ್ಳುವ ಪ್ರಯತ್ನ ನಡೆಸಿದ ತಾಲ್ಲೂಕಿನ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಮೂವರು ದಕ್ಷಿಣ ಆಫ್ರಿಕಾದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಪಕ್ಷಿರಾಜಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ಹಕ್ಕಿಪಿಕ್ಕಿ ಸಮಾಜದ ಒಂದನೇ ಬ್ಲಾಕ್‌ ನಿವಾಸಿ ಸಿಜ್ಜು, ಪ್ರವೀಣ್, ಮಧುಸೂದನ್‌ ಎಂಬುವವರು ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ ಪ್ರಾಂತ್ಯದ ನಂಫುಲಾ ನಗರದಲ್ಲಿ ಕಳೆದ ಮೂರು ತಿಂಗಳಿಂದ ಪೊಲೀಸ್‌ ವಶದಲ್ಲಿದ್ದಾರೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪೂವಯ್ಯ ತಿಳಿಸಿದ್ದಾರೆ.

9 ಮಹಿಳೆಯರು ಸೇರಿದಂತೆ 16 ಮಂದಿ ದಕ್ಷಿಣ ಆಫ್ರಿಕಾದಲ್ಲಿ ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಿ ಮಾರಾಟ ಮಾಡಲು ತೆರಳಿದ್ದರು. ಅವರಲ್ಲಿ 13 ಮಂದಿ ಹಿಂದಿರುಗಿದ್ದಾರೆ. ವೀಸಾ ಅವಧಿ ಮುಗಿದ ನಂತರವೂ ಮೂವರು ಅಲ್ಲೇ ಉಳಿದುಕೊಂಡಿದ್ದರು.

ADVERTISEMENT

ಸ್ಥಳೀಯ ಅಧಿಕಾರಿಗಳಿಗೆ ಲಂಚ ನೀಡಿ ದಾಖಲೆ ವಿಸ್ತರಿಸುವಂತೆ ಮನವಿ ಮಾಡಿದಾಗ, ಈ ಮೂವರನ್ನು ಪೊಲೀಸ್‌ ವಶಕ್ಕೆ ನೀಡಲಾಗಿದೆ. ಇದರಿಂದಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಆರೋಪ ಹೊತ್ತಿರುವ ಭಾರತೀಯ ನಾಗರಿಕರು ಸ್ವದೇಶಕ್ಕೆ ಹಿಂದಿರುಗಲು ದಕ್ಷಿಣ ಆಫ್ರಿಕಾದ ನಿಯಮಾನುಸಾರ ಮುಚ್ಚಳಿಕೆ ಬರೆದುಕೊಟ್ಟು, ದಂಡ ಪಾವತಿಸಬೇಕಿದೆ. ಲಂಚ ನೀಡುವ ಪ್ರಯತ್ನದಿಂದಾಗಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೊನೆಗೆ ರಾಯಭಾರಿ ಕಚೇರಿ ಮೆಟ್ಟಿಲೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.