ADVERTISEMENT

ಆದಿವಾಸಿಗಳಿಗೆ ಒಳಮೀಸಲಾತಿ ನೀಡಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 18:08 IST
Last Updated 11 ನವೆಂಬರ್ 2025, 18:08 IST
<div class="paragraphs"><p>ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ಆದಿವಾಸಿ ಬುಡಕಟ್ಟು ಸಮುದಾಯಗಳ ಒಳ ಮೀಸಲಾತಿ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಸಿ.ಎಸ್. ದ್ವಾರಕಾನಾಥ್ ಅವರು ಆದಿವಾಸಿ ಸಮುದಾಯಗಳ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಸಮಾಲೋಚನೆ ನಡೆಸಿದರು </p></div>

ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ಆದಿವಾಸಿ ಬುಡಕಟ್ಟು ಸಮುದಾಯಗಳ ಒಳ ಮೀಸಲಾತಿ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಸಿ.ಎಸ್. ದ್ವಾರಕಾನಾಥ್ ಅವರು ಆದಿವಾಸಿ ಸಮುದಾಯಗಳ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಸಮಾಲೋಚನೆ ನಡೆಸಿದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಪರಿಶಿಷ್ಟ ಪಂಗಡಗಳ ಬುಡಕಟ್ಟು ಸಮುದಾಯಗಳಿಗೂ ಒಳ ಮೀಸಲಾತಿ ಕಲ್ಪಿಸಲು ಆಯೋಗ ರಚಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಸಂಘಟನೆಗಳು ನಿರ್ಧರಿಸಿವೆ.

ADVERTISEMENT

ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌, ಪಾರ್ಧಿ ಹರಣಾ ಶಿಕಾರಿ ಸಂಘ ನಗರದ ಗಾಂಧಿ ಭವನದಲ್ಲಿ ಮಂಗಳವಾರ ಜಂಟಿಯಾಗಿ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿವೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ‘ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳಿಗೆ 15 ವಿಧಾನಸಭಾ ಮತ್ತು ಮೂರು ಲೋಕಸಭಾ ಮೀಸಲು ಕ್ಷೇತ್ರಗಳಿವೆ. ರಾಜ್ಯದ 49 ಆದಿವಾಸಿ ಸಮುದಾಯಗಳ ಒಬ್ಬರೂ ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿಲ್ಲ. ಈ ಜಾತಿ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿವೆ. ಇವತ್ತಿಗೂ ಹಲವರು ಗಂಜಿ ಮತ್ತು ಜಾನುವಾರುಗಳಿಗೆ ನೀಡುವ ಬೂಸಾ ತಿಂದು ಬದುಕುತ್ತಿದ್ದಾರೆ’ ಎಂದು ಅವರು ವಿಷಯ ಪ್ರಸ್ತಾಪಿಸಿದರು.

‘ಆದಿವಾಸಿ ಸಮುದಾಯಗಳಲ್ಲಿ ಒಗ್ಗಟ್ಟು ಮತ್ತು ನಾಯಕತ್ವದ ಕೊರತೆ ಇದೆ. ಹತ್ತು ವರ್ಷಗಳಲ್ಲಿ 19 ಆದಿವಾಸಿ ಜನರನ್ನು ಅರಣ್ಯ ಇಲಾಖೆಯವರು ಕೊಂದಿದ್ದಾರೆ. ಈ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗಿವೆ. ಇವರ ಸಂಖ್ಯೆ 10 ಸಾವಿರದಿಂದ 50 ಸಾವಿರದಷ್ಟು ಮಾತ್ರ ಇದ್ದು, ಪ್ರತ್ಯೇಕ ಹೋರಾಟದ ಮನವಿಯು ಸರ್ಕಾರಕ್ಕೆ ತಲುಪುವುದೇ ಇಲ್ಲ’ ಎಂದರು.

‘ನಗರ ಪ್ರದೇಶದ ಜನರು ಆದಿವಾಸಿಗಳ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು, ಅರ್ಹರಿಗೆ ಸವಲತ್ತುಗಳು ಸಿಗದ ಹಾಗೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಮತ್ತು ಅರ್ಹರಿಗೆ ಸವಲತ್ತು ತಲುಪುವಂತೆ ಮಾಡಲು ಒಳ ಮೀಸಲಾತಿ ಒಂದೇ ಪರಿಹಾರ. ಅದನ್ನು ಜಾರಿಗೆ ತರಲು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಆಯೋಗ ರಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಪ್ರಸ್ತಾವ ಮಂಡಿಸಿದರು. ಸಭೆಯಲ್ಲಿ ಭಾಗಿಯಾಗಿದ್ದವರು ಈ ಪ್ರಸ್ತಾವವನ್ನು ಒಪ್ಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.