ADVERTISEMENT

ಸಂಕಷ್ಟದಲ್ಲಿ ಮೆದು ಕಬ್ಬಿಣ ಕೈಗಾರಿಕೆಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಸೆಪ್ಟೆಂಬರ್ 2019, 8:51 IST
Last Updated 3 ಸೆಪ್ಟೆಂಬರ್ 2019, 8:51 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಹೊಸಪೇಟೆ: ಆರ್ಥಿಕ ಹಿಂಜರಿತದ ಬಿಸಿ ಬಳ್ಳಾರಿ ಜಿಲ್ಲೆಯ ಅದಿರಿನ ಉಂಡೆ (ಪೆಲೆಟ್ಸ್‌), ಮೆದು ಕಬ್ಬಿಣ (ಸ್ಪಾಂಜ್‌ ಐರನ್‌) ತಯಾರಿಸುವ ಕೈಗಾರಿಕೆಗಳಿಗೂ ತಟ್ಟಿದೆ.

ತೀವ್ರ ನಷ್ಟದಲ್ಲಿ ನಡೆಯುತ್ತಿರುವ ಕೈಗಾರಿಕೆಗಳ ಪೈಕಿ ಕೆಲವು ಬಂದ್‌ ಆಗುವ ಹಂತಕ್ಕೆ ತಲುಪಿದರೆ, ಕೆಲವು ಕೈಗಾರಿಕೆಗಳವರು ಉದ್ಯೋಗ ಕಡಿತಗೊಳಿಸಲು ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಿ ಕೆಲಸ ನಿರ್ವಹಿಸುವವರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಜಿಲ್ಲೆಯಲ್ಲಿ 70 ಅದಿರಿನ ಉಂಡೆ, ಮೆದು ಕಬ್ಬಿಣ ಕೈಗಾರಿಕೆಗಳಿವೆ. ಐ.ಟಿ.ಐ., ಡಿಪ್ಲೋಮಾ ಪೂರ್ಣಗೊಳಿಸಿದವರು ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಕಚ್ಚಾ ವಸ್ತು ಪೂರೈಸುವವರಲ್ಲಿ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಬ್ಬರಿಗೂ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ.

ADVERTISEMENT

ಗಣಿಯಿಂದ ನೇರವಾಗಿ ಈ ಕೈಗಾರಿಕೆಗಳಿಗೆ ಅದಿರು ಪೂರೈಕೆಯಾಗುತ್ತದೆ. ಅಲ್ಲಿ ಅದಿರಿನ ಉಂಡೆ, ಮೆದು ಕಬ್ಬಿಣ ತಯಾರಿಸಿ, ಅವುಗಳನ್ನು ಗೃಹ ನಿರ್ಮಾಣದಲ್ಲಿ ತೊಡಗಿರುವ ಕೈಗಾರಿಕೆಗಳು, ಆಟೊಮೊಬೈಲ್‌ ಕಂಪನಿಗಳು, ಸ್ಟೀಲ್‌ ರಾಡ್‌ ತಯಾರಿಸುವ ಕಂಪನಿಗಳಿಗೆ ಕಚ್ಚಾ ವಸ್ತು ಪೂರೈಸಲಾಗುತ್ತದೆ. ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್‌ ಸೇರಿದಂತೆ ಇತರೆ ಮಹಾನಗರಗಳಿಂದ ಹೆಚ್ಚಿನ ಬೇಡಿಕೆ ಬರುತ್ತದೆ. ಆದರೆ, ಆ ನಗರಗಳಿಂದ ಶೇ 50ರಿಂದ 70ರಷ್ಟು ಬೇಡಿಕೆ ಕಡಿಮೆಯಾಗಿದೆ. ಇದು ಇಲ್ಲಿನ ಕೈಗಾರಿಕೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ.

‘ಕಳೆದ ಕೆಲವು ತಿಂಗಳಿಂದ ಬೇಡಿಕೆಯೇ ಬರುತ್ತಿಲ್ಲ. ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಸಂಬಳ ಕೊಡಲು ಪರದಾಟ ನಡೆಸುವಂತಾಗಿದೆ. ಸ್ವಂತ ಆಸ್ತಿ, ಚಿನ್ನಾಭರಣ ಮಾರಾಟ ಮಾಡಿ ಕೆಲವರು ಸಂಬಳ ಪಾವತಿಸುತ್ತಿದ್ದಾರೆ. ಮತ್ತೆ ಕೆಲವರು ಕೈಗಾರಿಕೆ ಮುಚ್ಚಲು ಮುಂದಾಗಿದ್ದಾರೆ. ಸಂಕಷ್ಟದಲ್ಲಿರುವ ಕೈಗಾರಿಕೆಗಳ ನೆರವಿಗೆ ರಾಜ್ಯ, ಕೇಂದ್ರ ಸರ್ಕಾರ ಬರಬೇಕೆಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕರ್ನಾಟಕ ಸ್ಪಾಂಜ್‌ ಐರನ್‌ ತಯಾರಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ ದೊಡ್ಡ ಕೈಗಾರಿಕೆಗಳಿಗೆ ಕೊಡುವಷ್ಟು ಮಹತ್ವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೊಡುತ್ತಿಲ್ಲ. ಕೈಗಾರಿಕೆ ನಡೆಸುವುದು ಬಹಳ ಕಷ್ಟವಾಗುತ್ತಿದೆ. ಈಗಿನ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಎಲ್ಲ ಕೈಗಾರಿಕೆಗಳು ಬಂದ್‌ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಭವಿಷ್ಯದಲ್ಲಿ ಯಾರು ಕೂಡ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವುದಿಲ್ಲ’ ಎಂದರು.

‘ಈ ಹಿಂದೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗ ಇದೇ ರೀತಿಯ ಪರಿಸ್ಥಿತಿ ಉಂಟಾಗಿ, ಕೆಲವು ಕೈಗಾರಿಕೆಗಳು ಬಂದ್‌ ಆಗಿದ್ದವು. ಈಗ ಅದಕ್ಕಿಂತ ಗಂಭೀರವಾದ ಪರಿಸ್ಥಿತಿ ಇದೆ. ಮೆದು ಕಬ್ಬಿಣ ಘಟಕಗಳು ಸ್ಟಾರ್ಟ್‌ ಅಪ್‌ಗಳಿದಂತೆ. ಅವುಗಳನ್ನು ರಕ್ಷಿಸಿದರೆ ಅನೇಕ ಕೈಗಾರಿಕೆಗಳನ್ನು ರಕ್ಷಿಸಿದಂತಾಗುತ್ತದೆ’ ಎಂದು ಗಣಿ ತಜ್ಞ, ಪರಿಸರ ಹೋರಾಟಗಾರ ಶಿವಕುಮಾರ ಮಾಳಗಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.