ADVERTISEMENT

ಎರಡನೇ ರಾಜ್ಯ ಭಾಷೆಯಾಗಿ ತುಳು: ಅಧಿಕಾರಿಗಳ ತಂಡ ರಚನೆ– ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 16:06 IST
Last Updated 28 ಫೆಬ್ರುವರಿ 2024, 16:06 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಬೆಂಗಳೂರು: ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳುವನ್ನು ಪರಿಗಣಿಸಲು ಅಗತ್ಯ ಮಾಹಿತಿ ಸಂಗ್ರಹಕ್ಕಾಗಿ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪರಿಷತ್ತಿನಲ್ಲಿ ಜೆಡಿಎಸ್‌ನ ಬಿ.ಎಂ.ಫಾರೂಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಿ, ವರದಿ ನೀಡಲು ಮೋಹನ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ಹಿಂದೆ ಸಮಿತಿ ರಚಿಸಲಾಗಿತ್ತು. ತುಳು ಭಾಷೆಯ ಸ್ವರೂಪ, ಇತಿಹಾಸ, ಸಾಹಿತ್ಯ, ಪರಂಪರೆ, ಲಿಪಿ, ಶಾಸನಗಳ ಕುರಿತು ಅಧ್ಯಯನ ನಡೆಸಿದ ಸಮಿತಿ 2023ರ ಫೆಬ್ರುವರಿಯಲ್ಲೇ ವರದಿ ನೀಡಿದೆ ಎಂದರು. 

ADVERTISEMENT

ವರದಿಯ ಕುರಿತು ಅಭಿಪ್ರಾಯ ನೀಡಿರುವ ಕಾನೂನು ಇಲಾಖೆ, ರಾಜ್ಯ ಸರ್ಕಾರ ಯಾವುದೇ ಒಂದು ಭಾಷೆಯನ್ನು ತನ್ನ ಅಧಿಕೃತ ಭಾಷೆ ಎಂದು ಘೋಷಿಸಲು ಭಾರತ ಸಂವಿಧಾನದ ಅನುಚ್ಛೇದ 345ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ಕಾನೂನು ತಜ್ಞರ ಸಮಿತಿ ರಚಿಸಬೇಕಿದೆ. ಎರಡನೇ ಭಾಷೆಯನ್ನು ಘೋಷಿಸಿರುವ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತಿತರ ರಾಜ್ಯಗಳಿಂದ ಮಾಹಿತಿ ಕೇಳಲಾಗಿದೆ. ಆ ರಾಜ್ಯಗಳಿಂದ ಉತ್ತರ ಬಂದಿಲ್ಲ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳ ಸಮಿತಿ ರಚಿಸಲಾಗುತ್ತಿದೆ ಎಂದರು. 

ಕೊಡಗು ಭಾಷೆಯನ್ನೂ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಬೇಡಿಕೆ ಇದೆ. ಈಗಾಗಲೇ ಕನ್ನಡದ ಜತೆ ಇಂಗ್ಲಿಷ್‌ ಎರಡನೇ ಆಡಳಿತ ಭಾಷೆಯಾಗಿದೆ. ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.