ವಿಜಯೇಂದ್ರ
– ಪ್ರಜಾವಾಣಿ ಚಿತ್ರಗಳು
ಬೆಂಗಳೂರು: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಬೆಳೆಗೆ ನೀರು ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸ್ಥಳೀಯವಾಗಿ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ರಾಜ್ಯ ಘಟಕದ ಅಧ್ಯಕ್ಷರಾಗಿ ಎರಡು ವರ್ಷಗಳನ್ನು ಪೂರೈಸಿದ ಕಾರಣಕ್ಕೆ ಪಕ್ಷದ ಮುಖಂಡರಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಅಣೆಕಟ್ಟಿಗೆ 32 ಹೊಸ ಕ್ರಸ್ಟ್‌ಗೇಟ್ ಅಳವಡಿಕೆ ಮಾತ್ರವಲ್ಲದೆ, ಎಡ-ಬಲ ನಾಲೆಗಳ ದುರಸ್ತಿ ಕಾರ್ಯಕ್ಕೆ ಹಣ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳಿಗೆ ಘೋಷಿಸಿರುವ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಾತಿ–ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದರಲ್ಲೇ ಸಮಯ ಕಳೆಯುತ್ತಿದೆ. ಕಾಂಗ್ರೆಸ್ ಪಕ್ಷದ ಅಪಪ್ರಚಾರದ ನಡುವೆಯೂ ಬಿಹಾರದಲ್ಲಿ ಎನ್‍ಡಿಎ ಐತಿಹಾಸಿಕ ಗೆಲುವು ದಾಖಲಿಸಿದೆ. ಅಲ್ಲಿನ ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ತಿರಿಸ್ಕರಿಸಿದ್ದಾರೆ. ರಾಹುಲ್ ಗಾಂಧಿ ಅವರು ಬಿಹಾರ ಚುನಾವಣೆ ಮುಗಿಯುವವರೆಗೂ ಮತ ಕಳವಿನ ಅಪಪ್ರಚಾರದಲ್ಲಿ ತೊಡಗಿದ್ದರು. ಒಂದು ರೀತಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ, ಕುತಂತ್ರವನ್ನು ಮಾಡಿದ್ದರೂ ಅಲ್ಲಿನ ಮತದಾರರು ಮಣೆಹಾಕಲಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ನೀರಿನ ಹೆಜ್ಜೆ’ ಬಿಡುಗಡೆ ಮಾಡಿದ್ದಾರೆ. ನೀರಾವರಿ ಸಚಿವರಾಗಿ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಹೇಳಬೇಕು. ಉತ್ತರ ಕರ್ನಾಟಕ ಮತ್ತು ರೈತರ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.