ADVERTISEMENT

ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ಎರಡು ಲಕ್ಷ ಕ್ಯುಸೆಕ್‌ ನೀರು

ಕಂಪ್ಲಿ–ಗಂಗಾವತಿ ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 8:51 IST
Last Updated 22 ಅಕ್ಟೋಬರ್ 2019, 8:51 IST
   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದ್ದು, ಮಂಗಳವಾರ ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿದೆ.

ಸೇತುವೆ ಮುಳುಗಡೆಯಾಗಿರುವ ಕಾರಣ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರ್ಗಿ, ರಾಯಚೂರು, ತೆಲಂಗಾಣ ರಾಜಧಾನಿ ಹೈದರಾಬಾದ್‌, ಮಂತ್ರಾಲಯ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ಇನ್ನೂ ನೀರಿನಲ್ಲೇ ಇವೆ. ಮಂಗಳವಾರ ಹಂಪಿಯ ರಾಮ ಲಕ್ಷ್ಮಣ ದೇವಸ್ಥಾನದ ಅಂಗಳಕ್ಕೆ ನೀರು ಹೊಕ್ಕಿದೆ. ಮೂರು ದಿನಗಳಿಂದ ಹಂಪಿ–ವಿರೂಪಾಪುರ ಗಡ್ಡಿ ನಡುವೆ ದೋಣಿ ಸಂಚಾರ ಸ್ಥಗಿತಗೊಂಡಿದೆ. ‘ಪ್ರವಾಸಿಗರು ಹಾಗೂ ಸ್ಥಳೀಯರು ನದಿ ಪಾತ್ರದಲ್ಲಿ ಓಡಾಡಬಾರದು’ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ADVERTISEMENT

ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿದೆ. ಮಂಗಳವಾರ 1,55,431 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಎಲ್ಲ 33 ಕ್ರಸ್ಟ್‌ಗಳನ್ನು ತೆಗೆದು 2,01,000 ಕ್ಯುಸೆಕ್‌ ನೀರು ಹದಿಗೆ ಹರಿಸಲಾಗುತ್ತಿದೆ.

ಭಾರಿ ಮಳೆಗೆ ಹೂವಿನಹಡಗಲಿಯಲ್ಲಿ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಾಲ್ಲೂಕಿನ ಹಿರೇಕೊಳಚಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

ಮುಂದುವರಿದ ಮಳೆ:
ಬಳ್ಳಾರಿ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಸೋಮವಾರ ತಡರಾತ್ರಿಯಿಂದ ಬೆಳಗಿನ ಜಾವದ ವರೆಗೆ ವರ್ಷಧಾರೆಯಾಗಿದೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿಯಲ್ಲಿ ಉತ್ತಮ ಮಳೆಯಾದರೆ, ಬಳ್ಳಾರಿಯಲ್ಲಿ ಸಾಧಾರಣ ಮಳೆಯಾಗಿದೆ. ಹಗಲೆಲ್ಲ ಬಿಡುವು ಕೊಡುವ ಮಳೆ ರಾತ್ರಿಯಾಗುತ್ತಿದ್ದಂತೆ ಸುರಿಯುತ್ತಿದೆ.

ಕಂಪ್ಲಿ ಕೋಟೆಯವರೆಗೆ ನೀರು ನುಗ್ಗಿದ್ದು, ಕೆಲವು ಮನೆಗಳವರನ್ನು ಯಾವುದೇ ಕ್ಷಣದಲ್ಲಿ ಬೇರೆಡೆ ಸ್ಥಳಾಂತರಿಸುವ ಸಾಧ್ಯತೆ ಇದೆ. ನೂರಾರು ಎಕರೆ ಬಾಳೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.