ADVERTISEMENT

ಉಕ್ಕಿದ ತುಂಗಭದ್ರೆ: ಕಂಪ್ಲಿ–ಗಂಗಾವತಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 7:31 IST
Last Updated 8 ಸೆಪ್ಟೆಂಬರ್ 2019, 7:31 IST
   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಭಾನುವಾರ ಮತ್ತಷ್ಟು ಹೆಚ್ಚಳವಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ಕಂಪ್ಲಿ–ಗಂಗಾವತಿ ಸೇತುವೆ ಮೇಲೆ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ.

97,352 ಕ್ಯುಸೆಕ್‌ ಒಳಹರಿವು ಇದ್ದರೆ, 1,23,705 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಶನಿವಾರ 96,218 ಕ್ಯುಸೆಕ್‌ ಒಳಹರಿವು, 1,21,000 ಕ್ಯುಸೆಕ್‌ ಹೊರಹರಿವು ಇತ್ತು. ಸತತವಾಗಿ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಿಸುತ್ತಿರುವ ಕಾರಣ ಕಂಪ್ಲಿ–ಗಂಗಾವತಿ ಸೇತುವೆಗೆ ಸಮನಾಗಿ ನೀರು ಹರಿಯುತ್ತಿದೆ.

ಯಾವುದೇ ಸಂದರ್ಭದಲ್ಲಿ ಸೇತುವೆ ಮುಳುಗುವ ಸಾಧ್ಯತೆ ಇರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಡಳಿತವು ಶನಿವಾರ ರಾತ್ರಿಯಿಂದಲೇ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಿದೆ.

ADVERTISEMENT

ತಾಲ್ಲೂಕಿನ ಹಂಪಿಯ ನದಿ ಪಾತ್ರದ ಪುರಂದರ ಮಂಟಪ, ಚಕ್ರತೀರ್ಥ ಸಂಪೂರ್ಣ ಜಲಾವೃತವಾಗಿದೆ. ರಾಮ ಲಕ್ಷ್ಮಣ ದೇವಸ್ಥಾನ, ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸ್ನಾನಘಟ್ಟ ಬಹುತೇಕ ಮುಳುಗಿದ್ದು, ಆ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಆ ಮಾರ್ಗಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಜನರ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ.

ಶಿವಮೊಗ್ಗದ ತುಂಗಾ, ಭದ್ರಾ ಅಣೆಕಟ್ಟೆಯಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದು, ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಒಳಹರಿವು ಹೆಚ್ಚಾಗುತ್ತಲೇ ಇದೆ. ಒಳಹರಿವು ಇನ್ನಷ್ಟು ಹೆಚ್ಚಾದರೆ, ನದಿಗೆ ಹೆಚ್ಚಿನ ನೀರು ಹರಿಸಬೇಕಾಗುತ್ತದೆ.

ಎರಡು ಲಕ್ಷ ಕ್ಯುಸೆಕ್‌ ವರೆಗೆ ನೀರು ಹರಿಸಿದರೆ ತಾಲ್ಲೂಕಿನ ಹಂಪಿ, ವೆಂಕಟಾಪುರ, ಬುಕ್ಕಸಾಗರ ಗ್ರಾಮಗಳು ಮುಳುಗುವ ಭೀತಿಯಲ್ಲಿವೆ. ಇನ್ನೊಂದೆಡೆ ಹಂಪಿಯ ಎದುರು ಬಸವಣ್ಣ ಮಂಟಪದವರೆಗೆ ನೀರು ನುಗ್ಗಬಹುದು. ಆಗಸ್ಟ್‌ ಎರಡನೇ ವಾರದಲ್ಲಿ ಎರಡು ಲಕ್ಷ ಕ್ಯುಸೆಕ್‌ ನೀರು ಹರಿಸಿದ್ದರಿಂದ ಎಲ್ಲೆಡೆ ನೀರು ನುಗ್ಗಿತ್ತು. ಹಂಪಿಯ ತಳವಾರಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಜಲಾವೃತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.