ಬೆಂಗಳೂರು: ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್‌ಲಿಂಕ್ ಮುರಿದು ಬಿದ್ದಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ದೂರಿದ್ದಾರೆ.
ಈ ಕುರಿತು ‘ಎಕ್ಸ್’ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ. ಪ್ರಜೆಗಳ ಹಿತಕ್ಕಿಂತ, ಪಕ್ಷದ ಹಿತವೇ ಆದ್ಯತೆ ಆಗಿದೆ ಎಂದು ಟೀಕಿಸಿದ್ದಾರೆ.
ಭ್ರಷ್ಟಾಚಾರ, ರಾಜಕೀಯ ಮೇಲಾಟ, ಬಣ ಬಡಿದಾಟ, ಪಕ್ಕದ ರಾಜ್ಯಗಳ ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿಗಳಿಗೆ ಇಲಾಖೆ ಕರ್ತವ್ಯ ನಿವರ್ಹಿಸಲು ಪಾಪ ಸಮಯ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ವರ್ಷವೆಲ್ಲ ಬರಗಾಲದಿಂದ ತತ್ತರಿಸಿದ್ದ ರೈತರು ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಬೆಳೆ ತೆಗೆಯಬಹುದು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈಗ ಬಿತ್ತನೆಯಾಗಿರುವ ಒಂದು ಬೆಳೆಯೂ ಸಹ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದಾರೆ ಎಂದಿದ್ದಾರೆ.
ಕಾಲ ಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿಯ ಸಭೆ ಮಾಡಿ ಅಣೆಕಟ್ಟೆ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನ ಹರಿಸದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ಬರಗಾಲದಿಂದ ಜಲಾಶಯ ಖಾಲಿಯಾಗಿದ್ದಾಗ ಅಣೆಕಟ್ಟೆ ದುರಸ್ತಿ ಮಾಡಲು ಸಮಯವೂ ಇತ್ತು. ಅವಕಾಶವೂ ಇತ್ತು. ಆದರೆ, ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕೋದರಲ್ಲೇ ಸದಾಕಾಲ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿಯವರಿಗೆ ಅಣೆಕಟ್ಟೆ ರಿಪೇರಿ ಮಾಡಲು ಸಮಯವಾದರೂ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.