
ಬೆಂಗಳೂರು: ‘ನಗರದಲ್ಲಿ ಸುರಂಗ ರಸ್ತೆ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಮಾಹಿತಿ ನೀಡುತ್ತಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಸಾರ್ವಜನಿಕರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು’ ಎಂದು ಅವರು ಆಗ್ರಹಿಸಿದರು.
‘ನಾನು ಈ ಯೋಜನೆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ 124 ಇಲಾಖೆಗಳಿಂದ ಅನುಮತಿ ಪಡೆಯಬೇಕಿದೆ ಎಂದು ತಿಳಿದು ಬಂತು. ನನ್ನನ್ನೇ ಸಮಿತಿ ಅಧ್ಯಕ್ಷ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಂತಹ ಯೋಜನೆ ಮಾಡಲು ಅಗತ್ಯ ನೈಪುಣ್ಯ ಇದೆಯೇ ಎಂದು ಸಾಬೀತುಪಡಿಸಲು ಮೊದಲಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ರಸ್ತೆ ಗುಂಡಿಗಳನ್ನು ಮುಚ್ಚಿಸಲಿ. ಗುಂಡಿ ಮುಚ್ಚಲು ಆಗದವರು ಸುರಂಗ ಹೇಗೆ ಮಾಡುತ್ತಾರೆ? ಇದಕ್ಕೆ ಹಣ ಎಲ್ಲಿದೆ’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳಲ್ಲ. ಲಾಲ್‌ಬಾಗ್, ಕೆಂಪೇಗೌಡ ಗೋಪುರ ಹಾಳು ಮಾಡಬಾರದು. ಪರಿಸರ ನಾಶ ಮಾಡಬಾರದು. ಸರ್ಕಾರ ನನಗೆ ಉತ್ತರ ಕೊಡುವ ಬದಲು ಜನರಿಗೆ ಉತ್ತರ ನೀಡಬೇಕು. ನಾವು ಜನರ ಧ್ವನಿಯಾಗಿ ಮಾತನಾಡುತ್ತಿದ್ದೇವೆ’ ಎಂದರು.
‘ನವೆಂಬರ್ ಕ್ರಾಂತಿಯ ಬಗ್ಗೆ ಮಾಜಿ ಸಚಿವ ರಾಜಣ್ಣ ಹೇಳಿದ್ದಾರೆ. ರಾಮನಗರ, ದಾವಣಗೆರೆ ಶಾಸಕರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿದ್ದಾರೆ. ಯಾರೇ ಮುಖ್ಯಮಂತ್ರಿ ಆದರೂ ಜನರಿಗೆ ಒಳಿತು ಮಾಡಬೇಕೆಂದು ಒತ್ತಾಯಿಸುತ್ತೇವೆ. ಕ್ರಾಂತಿ ಹಾಗೂ ಭ್ರಾಂತಿ ಎರಡೂ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರೇ ಇಂತಹ ಮಾತನಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.