
ಮಂಡ್ಯ: ನಗರಸಭೆ, ಪುರಸಭೆ, ಹಳ್ಳಿಗಳ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುವ ಗೃಹತ್ಯಾಜ್ಯ ಮತ್ತು ಕೈಗಾರಿಕೆಗಳ ಕೊಳಚೆ ನೀರು ಸೇರ್ಪಡೆಯಿಂದಾಗಿ ರಾಜ್ಯದ 12 ಪ್ರಮುಖ ನದಿಗಳು ಕಲುಷಿತಗೊಂಡಿವೆ.
ಕಾವೇರಿ, ಕಬಿನಿ, ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾಗಿನ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ನದಿಗಳಿಗೆ ಒಳಚರಂಡಿ, ಕೊಳಚೆ ನೀರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸೇರ್ಪಡೆಯಾಗಿ ಜಲಚರಗಳಿಗೆ ಆಪತ್ತು ಎದುರಾಗಿದೆ. ಸುಮಾರು 700 ಕಿ.ಮೀ.ನಷ್ಟು ನದಿಯ ನೀರು ಮಲಿನಗೊಂಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿ.ಪಿ.ಸಿ.ಬಿ) 2018ರ ವರದಿಯಲ್ಲಿ ಮೊದಲಿಗೆ 17 ನದಿಗಳು ಮಲಿನವಾಗಿದೆ ಎಂದು ಗುರುತಿಸಲಾಗಿತ್ತು. 2023ರ ನಂತರ ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳು ಮಲಿನಗೊಳ್ಳದಿರುವುದರಿಂದ ಪಟ್ಟಿಯಿಂದ ಕೈಬಿಡಲು ರಾಜ್ಯ ಮಂಡಳಿಯು ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಮೂರು ನದಿಗಳು ಹಾಗೂ ಘಟಪ್ರಭಾ, ದಕ್ಷಿಣ ಪಿನಾಕಿನಿ ನದಿಗಳನ್ನೂ ಪರಿಷ್ಕೃತ ಪಟ್ಟಿಯಿಂದ ಕೈಬಿಡಲಾಗಿದೆ.
ಸಂಸ್ಕರಣೆಯಾಗದ ಕೊಳಚೆ ನೀರು:
‘ರಾಜ್ಯದಲ್ಲಿ ಒಟ್ಟು (ಬಿ.ಬಿ.ಎಂ.ಪಿ ಒಳಗೊಂಡಂತೆ) 184 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು (ಎಸ್.ಟಿ.ಪಿ) ಇವೆ. ನಿತ್ಯ 4,158 ಎಂ.ಎಲ್.ಡಿ (ದಿನಕ್ಕೆ ಮಿಲಿಯನ್ ಲೀಟರ್‌ಗಳು) ಕೊಳಚೆ ನೀರು ಉತ್ಪತ್ಪಿಯಾಗುತ್ತಿದೆ. 2,370 ಎಂ.ಎಲ್.ಡಿ.ಯಷ್ಟು ಸಂಸ್ಕರಿಸಲಾಗುತ್ತಿದೆ. ಆದರೆ, 1,788 ಎಂ.ಎಲ್.ಡಿ. ಕೊಳಚೆ ನೀರು ಸಂಸ್ಕರಣೆಯಾಗುತ್ತಿಲ್ಲ’ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತಿಳಿಸುತ್ತವೆ.
‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ 2018ರ ಆದೇಶದ ಪರಿಪಾಲನೆಗಾಗಿ ಮಂಡಳಿಯು 12 ನದಿಗಳ ದಂಡೆಯ ಮೇಲಿರುವ ನಗರಸಭೆ ಮತ್ತು ಪುರಸಭೆಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದೆ. ನಿಯಮಿತವಾಗಿ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುತ್ತಿದೆ. ಎಸ್‌ಟಿಪಿ ಅಳವಡಿಕೆಗೆ ನಿರ್ದೇಶನ ನೀಡುತ್ತಿದೆ’ ಎಂದು ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
‘ಈಗಾಗಲೇ ಮೈಸೂರು, ನಂಜನಗೂಡು, ಹುಣಸೂರು, ತಿ.ನರಸೀಪುರ, ಕನಕಪುರ ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಸಾರ್ವಜನಿಕರ ಸಹಕಾರ ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವ ಮಂಡಳಿಗೆ ಅಗತ್ಯವಾಗಿದೆಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಲುಷಿತಗೊಂಡಿರುವ ನದಿಗಳ ವಿವರ ನದಿ;ಎಲ್ಲಿಂದ ಎಲ್ಲಿಗೆ;ಉದ್ದ (ಕಿ.ಮೀ.) ಅರ್ಕಾವತಿ;ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕನಕಪುರ;55 ಶಿಂಷಾ;ಎಡೆಯೂರಿನಿಂದ ಹಲಗೂರು ಸೇತುವೆ;80 ತುಂಗಭದ್ರಾ;ಹರಿಹರದಿಂದ ಹರಳಹಳ್ಳಿ;60 ಭದ್ರಾ;ಭದ್ರಾವತಿಯಿಂದ ಹೊಳೆಹೊನ್ನೂರು;10 ಕಾವೇರಿ;ರಂಗನತಿಟ್ಟು ಪಕ್ಷಿಧಾಮದಿಂದ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸೇತುವೆ;50 ಕಬಿನಿ;ನಂಜನಗೂಡಿನಿಂದ ಹೆಜ್ಜಿಗೆ ಗ್ರಾಮ;9 ಕಾಗಿನ;ಶಹಾಬಾದ್‌ನಿಂದ ಹೊನಗುಂಟಾ;10 ಕೃಷ್ಣಾ;ಯಲಗೂರಿನಿಂದ ನಾರಾಯಣಪುರ ಡ್ಯಾಂ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ;189 ಭೀಮಾ;ಗಾಣಗಾಪುರದಿಂದ ಯಾದಗಿರಿ;160 ನೇತ್ರಾವತಿ;ಉಪ್ಪಿನಂಗಡಿಯಿಂದ ಮಂಗಳೂರು;50 ತುಂಗಾ;ಶಿವಮೊಗ್ಗದಿಂದ ಕೂಡ್ಲಿ;10 ಲಕ್ಷ್ಮಣತೀರ್ಥ;ಹುಣಸೂರಿನಿಂದ ಕಟ್ಟೆಮಳಲವಾಡಿ;10
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಕೊಳಚೆ ನೀರನ್ನು ನೇರವಾಗಿ ಸುಮಾರು 200 ವರ್ಷಗಳಿಂದ ಕಾವೇರಿ ನದಿಗೆ ಬಿಡುತ್ತಿರುವುದರಿಂದ ಮಂಡ್ಯ ಪಾಂಡವಪುರ ಮತ್ತು ಬೆಂಗಳೂರು ನಗರ ಪ್ರದೇಶಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕೂಡ ಕಲುಷಿತಗೊಂಡಿರುವ ಆತಂಕ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಮೇರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಪುರಸಭೆ ಮುಖ್ಯಾಧಿಕಾರಿ ಸೇರಿ 8 ಅಧಿಕಾರಿಗಳ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿಕೊಂಡು ವರದಿ ನೀಡಲು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.