ADVERTISEMENT

ಧರ್ಮ ವಿರೋಧಿ ಘೋಷಣೆ ಕೇಸ್‌ನಲ್ಲೂ ಆರೋಪಿ

ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ; ಅಮೂಲ್ಯಾ ವಿರುದ್ಧ ಮೂರು ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 5:58 IST
Last Updated 22 ಫೆಬ್ರುವರಿ 2020, 5:58 IST
ಅಮೂಲ್ಯಾ ಲಿಯೋನ್
ಅಮೂಲ್ಯಾ ಲಿಯೋನ್   

ಬೆಂಗಳೂರು: ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ‘ದೇಶದ್ರೋಹ’ ಆರೋಪದಡಿ ಜೈಲು ಸೇರಿರುವ ಅಮೂಲ್ಯಾ ಲಿಯೋನ್ (19), ಸರ್ಕಾರಿ ಕಾಲೇಜು ಆವರಣದಲ್ಲಿ ‘**** ಹಿಂದುತ್ವ’ ಎಂಬ ಧರ್ಮ ವಿರೋಧಿ ಘೋಷಣೆ ಫಲಕ ಪ್ರದರ್ಶಿಸಿದ್ದ‍ಪ್ರಕರಣದಲ್ಲೂ ಆರೋಪಿ.

‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಹೋರಾಟ ಆರಂಭವಾದಾಗಿನಿಂದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಬೆಂಗಳೂರಿನ ಬೇರೆ ಬೇರೆ ಕಾಲೇಜುಗಳ ಕೆಲ ವಿದ್ಯಾರ್ಥಿಗಳು ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ ಆರಂಭಿಸಿದ್ದಾರೆ. ಇದೇ ತಂಡದಲ್ಲಿರುವ ಅಮೂಲ್ಯಾ ಸೇರಿ ಕೆಲ ವಿದ್ಯಾರ್ಥಿಗಳು, ಭಾಷಣಕಾರರಾಗಿ ಹಲವು ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಮೂಲ್ಯಾ ಹಾಗೂ ಸಂಗಡಿಗರ ವಿರುದ್ಧ ಹಲಸೂರು ಗೇಟ್ ಹಾಗೂ ಚಂದ್ರಾಲೇಔಟ್ ಠಾಣೆಯಲ್ಲಿ ಈಗಾಗಲೇ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ‘ದೇಶದ್ರೋಹ’ ಆರೋಪದಡಿ ಉಪ್ಪಾರಪೇಟೆ ಠಾಣೆಯಲ್ಲಿ ಗುರುವಾರ ಮೂರನೇ ಎಫ್‌ಐಆರ್ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣದಿಂದ ಶಾಂತಿ ಕದಡುವುದು ಈ ಗುಂಪಿನ ಉದ್ದೇಶವೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

ADVERTISEMENT

ಕ್ಯಾಂಪಸ್‌ಗೆ ಅಕ್ರಮವಾಗಿ ನುಗ್ಗಿ ಪ್ರತಿಭಟನೆ; ‘ನಗರದ ಸರ್ಕಾರಿ ಕಲಾ ಕಾಲೇಜು ಕ್ಯಾಂಪಸ್‌ಗೆ ಕಳೆದ ಡಿ. 20ರಂದು ಅಕ್ರಮವಾಗಿ ನುಗ್ಗಿದ್ದ ಅಮೂಲ್ಯಾ ಹಾಗೂ ಸಂಗಡಿಗರು,ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಿದ್ದರು’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಪ್ರತಿಭಟನೆ ವೇಳೆಯೇ‘**** ಹಿಂದುತ್ವ’ ಎಂಬ ಧರ್ಮ ವಿರೋಧಿ ಘೋಷಣೆ ಫಲಕವನ್ನೂ ಪ್ರದರ್ಶಿಸಿದ್ದರು. ಅಮಾಯಕ ವಿದ್ಯಾರ್ಥಿಗಳಿಗೂ ತೊಂದರೆಯನ್ನುಂಟು ಮಾಡಿದ್ದರು. ಈ ಸಂಬಂಧ ಕಾಲೇಜಿನ ಪ್ರಾಚಾರ್ಯರಾದ ಎಂ.ಎ. ನೀಲಾವತಿ ದೂರು ನೀಡಿದ್ದರು’ ಎಂದು ತಿಳಿಸಿದರು.

‘ಕೋಮು ಸೌಹಾರ್ದಕ್ಕೆ ಧಕ್ಕೆ (ಐಪಿಸಿ 295–ಎ), ಎರಡು ಧರ್ಮಗಳ ಜನರ ನಡುವೆ ವೈಷಮ್ಯ ಸೃಷ್ಟಿಸಲು ಯತ್ನ (ಐಪಿಸಿ 153–ಎ),ಅನುಮತಿ ಇಲ್ಲದೇ ಗುಂಪುಗೂಡುವುದು (ಐಪಿಸಿ 143) ಹಾಗೂ ಗಲಭೆ ಸೃಷ್ಟಿಸಿದ (ಐಪಿಸಿ 448) ಆರೋಪದಡಿ ಅಮೂಲ್ಯಾ ಸೇರಿ 10 ವಿದ್ಯಾರ್ಥಿಗಳ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಅಧಿಕಾರಿ ವಿವರಿಸಿದರು.

ಅನುಮತಿ ಇಲ್ಲದೇ ಪ್ರತಿಭಟನೆ; ‘ಪೊಲೀಸ್ ಇಲಾಖೆ ಅನುಮತಿ ಇಲ್ಲದೇ ಇತ್ತೀಚೆಗೆ ಗಂಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಕೆಲವರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದಲ್ಲೂ ಅಮೂಲ್ಯಾ ಸೇರಿ 48 ಮಂದಿ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು’ ಎಂದು ಅಧಿಕಾರಿ ಹೇಳಿದರು.

‘ಎರಡೂ ಪ್ರಕರಣದಲ್ಲೂ ತನಿಖೆ ನಡೆಯುತ್ತಿದ್ದು, ಇದರ ಬೆನ್ನಲೇ ಅಮೂಲ್ಯಾ ಈ ರೀತಿ ಘೋಷಣೆ ಕೂಗಿದ್ದಾಳೆ’ ಎಂದು ತಿಳಿಸಿದರು.

ಎಸಿಪಿ ನೇತೃತ್ವದಲ್ಲಿ ತನಿಖೆ
ದೇಶದ್ರೋಹ ಪ್ರಕರಣದ ತನಿಖೆಗಾಗಿ ಚಿಕ್ಕಪೇಟೆ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಸಂಪರ್ಕಿಸಿ ಅಮೂಲ್ಯಾ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

‘ಅಮೂಲ್ಯ ಹಿಂದೆ ಹಲವರು ಇರುವ ಮಾಹಿತಿ ಇದೆ. ಹೀಗಾಗಿ, ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಆಕೆಯ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ನಿಶ್ಚಿತ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಘೋಷಣೆ ಕೂಗುವ ಉದ್ದೇಶವಿರಲಿಲ್ಲ’
‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗುವ ಉದ್ದೇಶ ಇರಲಿಲ್ಲ. ಸ್ಪಷ್ಟನೆ ನೀಡಬೇಕು ಎನ್ನುಷ್ಟರಲ್ಲೇ ಮೈಕ್ ಕಸಿದುಕೊಂಡರು’ ಎಂದು ಅಮೂಲ್ಯಾ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

‘ಸಿಎಎ ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹಲವರು ಹೇಳುತ್ತಿದ್ದಾರೆ. ಅಂಥವರಿಗೆ ಉತ್ತರ ನೀಡುವ ಸಲುವಾಗಿ ಈ ರೀತಿ ಮಾಡಿದೆ. ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರೆ ಜನರೆಲ್ಲರೂ ಮೌನವಾಗುತ್ತಾರೆ. ಅವಾಗಲೇ ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರೆ ಜನರೂ ಧ್ವನಿಗೂಡಿಸುತ್ತಾರೆ. ಅದನ್ನೇ ವಿವರಿಸಿ ನಾವೆಲ್ಲರೂ ಭಾರತೀಯರು. ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗಿ ಹೇಳುವ ಉದ್ದೇಶ ನನ್ನದ್ದಾಗಿತ್ತು’ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

'ವಿಐಪಿ ಬ್ಯಾಡ್ಜ್‌‘ ಧರಸಿದ್ಧ ‘ಅಮೂಲ್ಯ‘
ಬೆಂಗಳೂರು:‘ಪ್ರತಿಭಟನೆ ಹಮ್ಮಿಕೊಂಡಿದ್ದ ಆಯೋಜಕರು ಆಹ್ವಾನಿತರಿಗಾಗಿ ‘ವಿಐಪಿ ಬ್ಯಾಡ್ಜ್’ಗಳನ್ನು ಸಿದ್ಧಪಡಿಸಿದ್ದರು. ಅದೇ ಬ್ಯಾಡ್ಜ್‌ ಧರಿಸಿಕೊಂಡು ಅಮೂಲ್ಯಾ ವೇದಿಕೆ ಏರಿದ್ದರು. ಆದರೆ, ಅವರನ್ನು ಪ್ರತಿಭಟನೆಗೆ ಆಹ್ವಾನಿಸಿರಲಿಲ್ಲವೆಂದು ಆಯೋಜಕರು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬ್ಯಾಡ್ಜ್‌ ನೋಡಿದ್ದ ಆಯೋಜಕರೇ ಅಮೂಲ್ಯಾಳಿಗೆ ಮೈಕ್‌ ನೀಡಿ ಭಾಷಣ ಮಾಡಲು ಹೇಳಿದ್ದರು. ಭಾಷಣದ ಆರಂಭದಲ್ಲೇ ಅಮೂಲ್ಯಾ, ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ವಿವಾದಕ್ಕೆ ಕಾರಣವಾದರು. ಘಟನೆ ಸಂಬಂಧ ಆಯೋಜಕರನ್ನು
ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ತಿಳಿಸಿದರು.

‘ಸಂಘಟಕರ ವಿರುದ್ಧವೂ ಕ್ರಮ’: ‘ಅಮೂಲ್ಯಾ ಲಿಯೋನಾ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ’ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ದೇಶದ್ರೋಹದ ವರ್ತನೆಗಳನ್ನು ನಾವು ಸಹಿಸುವುದಿಲ್ಲ. ಸಿಎಎ ವಿರೋಧಿಸಿ ಶುಕ್ರವಾರ ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಇಂಥ ಪ್ರತಿಭಟನೆಗಳಿಗೆ ಅನುಮತಿ ನೀಡುವಾಗ ಹೆಚ್ಚಿನ ಷರತ್ತು ವಿಧಿಸಲಾಗುವುದು. ವೇದಿಕೆಯಲ್ಲಿ ಕುಳಿತುಕೊಳ್ಳುವರ ಮಾಹಿತಿ
ಯನ್ನೂ ಮೊದಲೇ ಪಡೆಯಲಾಗುವುದು' ಎಂದರು.

ಆಯೋಜಕರ ವಿಚಾರಣೆ: ಪ್ರತಿಭಟನಾ ಸಭೆ ಆಯೋಜಿಸಿದವರೇ ಅಮೂಲ್ಯಾ ಅವರಿಗೆ ಭಾಷಣ ಮಾಡಲು ಅವಕಾಶ ನೀಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಅದೇ ಕಾರಣಕ್ಕೆ ಆಯೋಜಕರೂ ಆಗಿರುವ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್ ಪಾಷಾ, ‘ಅಮೂಲ್ಯಾಳಿಗೆ ಯಾವುದೇ ಆಹ್ವಾನ ನೀಡಿರಲಿಲ್ಲ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿ ಅವರಿಗೆ ನಾವೇ ದೂರು ನೀಡಿದ್ದೇವೆ' ಎಂದರು.

*
ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ. ಪೊಲೀಸರು ಸರಿಯಾಗಿ ತನಿಖೆ ನಡೆಸಿ ಆಕೆಗೆ ತನ್ನ ತಪ್ಪಿನ ಅರಿವಾಗುವಂತಹ ಶಿಕ್ಷೆ ನೀಡಬೇಕು.
ಸಿದ್ದರಾಮಯ್ಯ,ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಉದ್ದೇಶಪೂರ್ವಕವಾಗಿ ಅಥವಾ ಪ್ರಚಾರಕ್ಕಾಗಿ ಹೇಳಿಕೆಕೊಟ್ಟಿದ್ದಾಳೊ ಎಂಬ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ಆಕೆಗೆ ತಿಳಿವಳಿಕೆ ಇದೆಯೋ, ಇಲ್ಲವೋ ಗೊತ್ತಿಲ್ಲ
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

*
ಅಮೂಲ್ಯಾಗೆ ನಕ್ಸಲರ ಜತೆ ಸಂಬಂಧ ಇದ್ದಿದ್ದು ಹಿಂದೆ ಸಾಬೀತಾಗಿತ್ತು. ತನಿಖೆ ನಡೆಸಿದರೆ ಆಕೆಗೆ ಪ್ರೇರಣೆ ಕೊಟ್ಟಿರುವುದು ಯಾರೆಂದು ಗೊತ್ತಾಗಲಿದೆ.
ಬಿ.ಎಸ್‌. ಯಡಿಯೂರಪ್ಪ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.