ಬೆಂಗಳೂರು: ‘ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ನೆಲಮಂಗಲ–ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಈ ಎರಡೂ ಸ್ಥಳಗಳು ಬೆಂಗಳೂರು ಕೇಂದ್ರ ಸ್ಥಾನದಿಂದ 50 ಕಿ.ಮೀ.ದೂರದಲ್ಲಿವೆ. ನೆಲಮಂಗಲ–ಹಾಸನ ಹೆದ್ದಾರಿ ಜಂಕ್ಷನ್‌ನಿಂದ 10 ಕಿ.ಮೀ. ದೂರದಲ್ಲಿ ಒಂದು ಸ್ಥಳ, ಕನಕಪುರ ರಸ್ತೆ–ನೈಸ್ ರಸ್ತೆ ಜಂಕ್ಷನ್‌ನಿಂದ 10 ಕಿ.ಮೀ. ದೂರದಲ್ಲಿ ಇನ್ನೊಂದು ಸ್ಥಳ ಗುರುತಿಸಲಾಗಿದೆ’ ಎಂದರು.
‘ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಮೀಪ ಇವೆ ಇಲ್ಲವೇ ಅವಕ್ಕೆ ಹೊಂದಿಕೊಂಡಿವೆ. ಅಲ್ಲದೆ ಈಗಾಗಲೇ ಇರುವ ಮೆಟ್ರೊ ಜಾಲದ ಕೊನೆಯ ನಿಲ್ದಾಣಗಳಗೆ ಕೆಲವೇ ಕಿ.ಮೀ. ಅಂತರದಲ್ಲಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಎರಡು ಸ್ಥಳಗಳನ್ನು ಗುರುತಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಈ ಸಂಬಂಧ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ನಂತರ ಒಪ್ಪಿಗೆ ನೀಡಲಿದ್ದಾರೆ. ಅವರು ಒಪ್ಪಿಗೆ ನೀಡಿದರಷ್ಟೇ ಸಾಲದು. ಆನಂತರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಿದ್ದೇವೆ. ಆ ವರದಿಯನ್ನು ಆಧರಿಸಿ ಸ್ಥಳವನ್ನು ಅಂತಿಮಗೊಳಿಸುತ್ತೇವೆ’ ಎಂದರು.
ಪ್ರಸ್ತಾವಿತ ಸ್ಥಳಗಳು ನೆಲಮಂಗಲ ತುಮಕೂರು ಕಡೆಗೆ ಬೆಂಗಳೂರು ಕಡೆಗೆ ಹಾಸನ ಕಡೆಗೆ ನೆಲಮಂಗಲ ಬೈಪಾಸ್ ಜಂಕ್ಷನ್ ಇಲ್ಲಿಂದ 10 ಕಿ.ಮೀ.ದೂರದಲ್ಲಿ ಜಾಗ ಗುರುತಿಸಲಾಗಿದೆ. ಕನಕಪುರ ಕಡೆಗೆ ಬೆಂಗಳೂರು ಕಡೆಗೆ ಮೈಸೂರು ರಸ್ತೆ ಕಡೆಗೆ ಹೊಸೂರು ರಸ್ತೆ ಕಡೆಗೆ ನೈಸ್ ರಸ್ತೆ ಜಂಕ್ಷನ್ ಇಲ್ಲಿಂದ 10 ಕಿ.ಮೀ. ದೂರದಲ್ಲಿ ಜಾಗ ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.