
ಬೆಂಗಳೂರು: ‘ಕರ್ನಾಟಕದ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ತರಬೇತಿ ಪಡೆದು ಅತ್ಯುನ್ನತ ಮಟ್ಟದ ಕೌಶಲ ತರಬೇತಿ ಪಡೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ’ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ 2026ರ ಫೆಬ್ರವರಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಉದ್ಯೋಗ ಮೇಳಕ್ಕೆ ಪೂರ್ವಭಾವಿಯಾಗಿ ಶರಣಪ್ರಕಾಶ್ ಆರ್. ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಯುರೋಪ್ ಖಂಡದ ಪ್ರವಾಸ ಕೈಗೊಂಡಿದ್ದು, ವಿವಿಧ ನಗರಗಳಲ್ಲಿ ರೋಡ್ ಶೋ ನಡೆಸಿದ್ದಾರೆ.
‘ಸ್ಲೋವಾಕಿಯಾ ರಾಜಧಾನಿ ಬ್ರಾಟಿಸ್ಲಾವಾದಲ್ಲಿರುವ ಸಿಟ್ರೊಯೆನ್ C3, C3 ಏರ್‌ಕ್ರಾಸ್ ಮತ್ತು ಒಪೆಲ್ ಫ್ರಾಂಟೆರಾ ಮಾದರಿಗಳ ವಾಹನ ತಯಾರಕ ಸಂಸ್ಥೆ ಸ್ಟೆಲ್ಲಾಂಟಿಸ್ ಈಗಾಗಲೇ ಆಟೊಮೊಬೈಲ್ ವಿದ್ಯುತ್ ಕೌಶಲ ತರಬೇತಿ ಹೊಂದಿದವರನ್ನು ಕಳುಹಿಸಿಕೊಡಬೇಕೆಂದು ಮನವಿ ಮಾಡಿದೆ. ಬ್ರಾಟಿಸ್ಲಾವಾ ಬಳಿಯ ತ್ರ್ವಾನಾ ಘಟಕದಲ್ಲಿ ಕರ್ನಾಟಕದ ಸುಮಾರು 100 ಅಸೆಂಬ್ಲಿ-ಲೈನ್ ಆಪರೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸುಮಾರು 1,300 ವಾಹನಗಳನ್ನು ತಯಾರಿಸುತ್ತಿದ್ದಾರೆ.’ ಎಂದಿದ್ದಾರೆ.
ಅಸೆಂಬ್ಲಿ ಲೈನ್ ಆಪರೇಟರ್‌ಗಳಿಗೆ ಅವಕಾಶ: ‘ಸ್ಟೆಲ್ಲಾಂಟಿಸ್ ಕಂಪನಿಯು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ (ಕೆವಿಟಿಎಸ್‌ಡಿಸಿ) ವತಿಯಿಂದ ತರಬೇತಿ ಪಡೆದಿರುವ 100 ಅಸೆಂಬ್ಲಿ-ಲೈನ್ ಆಪರೇಟರ್‌ಗಳನ್ನು ನೇಮಿಸಿಕೊಂಡಿದೆ. 50ಕ್ಕೂ ಹೆಚ್ಚು ಭಾರಿ ವಾಹನ ಚಾಲಕರನ್ನೂ ನೇಮಿಸಲಾಗಿದೆ’ ಎಂದಿದ್ದಾರೆ.
ಸ್ಟೆಲ್ಲಾಂಟಿಸ್ ನೇಮಕಾತಿ ಮುಖ್ಯಸ್ಥರಾದ ಕತ್ರಿನಾ ಫೆಲ್ಕೋವಾ, ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸ್ಲೋವಾಕಿಯಾದಲ್ಲಿ ಭಾರತೀಯ ರಾಯಭಾರಿ ಅಪೂರ್ವ ಶ್ರೀವಾಸ್ತವ ಅವರನ್ನು ಒತ್ತಾಯಿಸಿದರು.
‘ಕರ್ನಾಟಕದಿಂದ ವಾರ್ಷಿಕವಾಗಿ ಒಂದು ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಿದರೆ ಎಲ್ಲ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು’ ಎಂದು ಡಾ. ಪಾಟೀಲ್ ಮತ್ತು ಡಾ. ಸುಧಾಕರ್ ವಿವರಿಸಿದರು.
ಡಿಎಚ್‌ಎಲ್ ಬೇಡಿಕೆ: ‘ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಡಿಎಚ್‌ಎಲ್ ಕರ್ನಾಟಕದಲ್ಲಿ ಕೌಶಲ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಪೂರೈಸಬೇಕು’ ಎಂದು ಡಿಎಚ್‌ಎಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲೋಸ್ ಗೋಸಿಕ್ ಬೇಡಿಕೆ ಮಂಡಿಸಿದರು.
ಸ್ಲೋವಾಕಿಯಾದಲ್ಲಿ ಉದ್ಯೋಗ ಪಡೆದಿರುವ ಕಲಬುರಗಿ ಜಿಲ್ಲೆಯ ಸೇಡಂನ ಸುನಿಲ್ ಕುಮಾರ್ ಮತ್ತು ಧಾರವಾಡ ಜಿಲ್ಲೆಯ ಕಲಘಟಗಿಯ ರೋಹನ್ ಲಗಾಲಿ ಜೊತೆ ಸಚಿವರು ಚರ್ಚೆ ನಡೆಸಿದರು.
ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ್, ಕ್ರಿಸ್ತಗೌಡ ತಾಯಣ್ಣವರ್, ರಾಮೇಗೌಡ ಮತ್ತು ಕೆ.ಎಸ್. ಅವಿನಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.