ದಾಬಸ್‌ಪೇಟೆ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ₹ 45 ಲಕ್ಷ ಪಡೆದು ವಂಚನೆ ಮಾಡಿದ ಆರೋಪದ ಮೇರೆಗೆ ವೈದ್ಯ ಸೇರಿ ಇಬ್ಬರನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲ ತಾಲ್ಲೂಕಿನ ಬಿಲ್ಲನಕೋಟೆ ನಿವಾಸಿ ಬಿ.ಎಸ್.ಅನಿಲ್ ಕುಮಾರ್ ಅವರ ದೂರಿನ ಮೇರೆಗೆ ಆರೋಗ್ಯ ಭಾರತಿ ಆಸ್ಪತ್ರೆಯ ವೈದ್ಯ ಚಂದ್ರಶೇಖರ್ ಹಾಗೂ ಅವರ ಸ್ನೇಹಿತ ಮಾಚನಹಳ್ಳಿ ಗ್ರಾಮದ ಯೋಗೇಂದ್ರ ಅವರನ್ನು ಬಂಧಿಸಿ, ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಿದ್ದಾರೆ.
‘ಅನ್ಯಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ಪಟ್ಟಣದ ಆರೋಗ್ಯ ಭಾರತಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಡಾ. ಚಂದ್ರಶೇಖರ್ ಅವರ ಪರಿಚಯವಾಯಿತು. ಯಾರಿಗಾದರೂ ಸರ್ಕಾರಿ ಉದ್ಯೋಗ ಬೇಕಾದರೆ ಕೊಡಿಸುತ್ತೇನೆ. ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದೇನೆ ಎಂದು ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ವೈದ್ಯರು ತೋರಿಸಿದರು. ನನ್ನ ಪತ್ನಿಯ ತಮ್ಮ ಪಿಎಸ್‌ಐ ಪರೀಕ್ಷೆ ಬರೆದಿರುವುದನ್ನು ಹೇಳಿದಾಗ, ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಸ್ನೇಹಿತ ಯೋಗೇಂದ್ರ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ. ಅದಕ್ಕೆ ₹45 ಲಕ್ಷ ನೀಡಬೇಕೆಂದರು’ ಎಂದು ಅನಿಲ್ ಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
‘2021ರ ಅಕ್ಟೋಬರ್ 17ರಂದು ಆರೋಪಿಗಳಾದ ಡಾ.ಚಂದ್ರಶೇಖರ್ ಹಾಗೂ ಯೋಗೇಂದ್ರ ಸಮೀಪದ ಹೋಟೆಲ್‌ಗೆ ನನ್ನನ್ನು ಕರೆಸಿಕೊಂಡು ಪಿಎಸ್‌ಐ ಹುದ್ದೆ ಕೊಡಿಸುವ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ತಾಕೀತು ಮಾಡಿದರು. ಅವರು ಸೂಚಿಸಿದ ಕರೂರ್ ವೈಶ್ಯ ಹಾಗೂ ಐಸಿಐಸಿಐ ಬ್ಯಾಂಕ್ ಖಾತೆಗಳಿಗೆ ₹45 ಲಕ್ಷ ನಗದು ಅನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದೆ’ ಎಂದು ಹೇಳಿದ್ದಾರೆ.
‘ಕೆಲ ದಿನಗಳ ನಂತರ ಚಂದ್ರಶೇಖರ್ ಕರೆ ಮಾಡಿ, ನನ್ನ ಬಾಮೈದನಿಗೆ ಪಿಎಸ್‌ಐ ಹುದ್ದೆ ನೇಮಕಾತಿ ಆಗಿದೆ ಎಂದು ತಾತ್ಕಾಲಿಕ ಆಯ್ಕೆ ಪಟ್ಟಿ ತೋರಿಸಿದರು. ಹಲವು ದಿನಗಳು ಕಳೆದರೂ ಪರಿಶೀಲನೆಗೆ ಬಾರದೇ ಇದ್ದಾಗ ಅನುಮಾನಗೊಂಡು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ವಾಪಸ್ ಹಣ ಕೇಳಿದಾಗ ₹ 15 ಲಕ್ಷವನ್ನು ನನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು. ಉಳಿದ ಹಣ ಕೇಳಿದಾಗ, ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಸಿ, ಹಲ್ಲೆ ನಡೆಸಿದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯೋಗೇಂದ್ರ ವಿರುದ್ಧ ಪ್ರಕರಣಗಳು: ಚಿನ್ನದ ವ್ಯಾಪಾರ ಹಾಗೂ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೋಗೇಂದ್ರ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ, ಯಲಹಂಕ ನ್ಯೂಟೌನ್, ವಿಶ್ವೇಶ್ವರಪುರ, ಹಿರಿಯೂರು, ಚಿತ್ರದುರ್ಗ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಯಲ್ಲಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಅವರನ್ನು ವಜಾ ಮಾಡಲಾಗಿದೆ. ಒಂದೂವರೆ ವರ್ಷದಿಂದ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.