ADVERTISEMENT

‌ಕರ್ನಾಟಕ ಪರೀಕ್ಷಾ ‍ಪ್ರಾಧಿಕಾರಕ್ಕೆ ಹೊಸ ‌ಸ್ವರೂಪ: ಎರಡು ಪ್ರತ್ಯೇಕ ವಿಭಾಗ ರಚನೆ?

ಎರಡು ಪ್ರತ್ಯೇಕ ವಿಭಾಗ: ಆರ್ಥಿಕ ಇಲಾಖೆಗೆ ಪ್ರಸ್ತಾವ

ರಾಜೇಶ್ ರೈ ಚಟ್ಲ
Published 4 ಡಿಸೆಂಬರ್ 2022, 1:14 IST
Last Updated 4 ಡಿಸೆಂಬರ್ 2022, 1:14 IST
   

ಬೆಂಗಳೂರು: ಎಲ್ಲ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನುಸರಳೀಕರಿಸಲು ಎರಡು ಪ್ರತ್ಯೇಕ ವಿಭಾಗಗಳನ್ನು ಸೃಜಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸೀಟು ಹಂಚಿಕೆಗೆಂದೇ ಒಂದು ವಿಭಾಗ ಮೀಸಲಿರಿಸಲು ಕೆಇಎ ಉದ್ದೇಶಿಸಿದೆ. ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಆಯ್ಕೆ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಮತ್ತೊಂದು ವಿಭಾಗವನ್ನು ರಚಿಸಲು ತೀರ್ಮಾನಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ, ‘ಸದ್ಯದ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆಗಳನ್ನು ನಿಗದಿತ ಸಮಯದಲ್ಲಿ ಮಾಡಲು ಕಷ್ಟವಾಗುತ್ತಿದೆ. ಕೆಲಸದ ಒತ್ತಡ ಕಡಿಮೆ ಮಾಡಲು ಪ್ರತ್ಯೇಕ ವಿಭಾಗದ ಅಗತ್ಯವಿದೆ. ಹೀಗಾಗಿ, ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ADVERTISEMENT

ಪ್ರಸ್ತಾವದಲ್ಲಿ ಏನಿದೆ?: ‘ಎರಡೂ ವಿಭಾಗಗಳಿಗೆ ಪ್ರತ್ಯೇಕ ಕೆಎಎಸ್‌ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನಿಯೋಜಿಸಲು ಹಾಗೂ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು, ಲೆಕ್ಕ ಶಾಖೆಯ ಸಿಬ್ಬಂದಿ, ಕಾನೂನು ಸಲಹೆಗಾರರ ಹುದ್ದೆ ಸೃಜಿಸಬೇಕು. ಎಲ್ಲ ಕೆಲಸಗಳು ಆನ್‌ಲೈನ್‌ ಮೂಲಕ ನಡೆಯುವುದರಿಂದ ಗಣಕ ಶಾಖೆಯನ್ನು ಬಲಪಡಿಸಬೇಕು. ಅಲ್ಲಿಗೆ ಹಿರಿಯ, ಕಿರಿಯ ಪ್ರೋಗ್ರಾಮರ್‌, ಡಾಟಾ ಬೇಸ್‌ ಅಡ್ಮಿನಿಸ್ಟ್ರೇಟರ್‌, ಡಾಟಾ ಅನಲಿಸ್ಟ್‌ ಮುಂತಾದ 20 ಹುದ್ದೆಗಳನ್ನು ಸೃಜಿಸಬೇಕು’ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

‘ನೀಟ್‌ ವ್ಯವಸ್ಥೆಯ ಬಳಿಕ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಸೀಟು ಹಂಚಿಕೆ ಕೌನ್ಸೆಲಿಂಗ್‌‌ ಪ್ರತ್ಯೇಕ
ವಾಗಿ ನಡೆಸಲಾಗುತ್ತದೆ. ಇದರಿಂದಾಗಿ ಎಂಜಿನಿಯರಿಂಗ್‌ ಸೀಟು ರದ್ದುಗೊಳಿಸದೆ ಕೆಲವರು ವೈದ್ಯಕೀಯ ಸೀಟು ಪಡೆಯುತ್ತಿದ್ದಾರೆ. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಎರಡೂ ಸೀಟು ಒಬ್ಬ ಪಡೆಯಲು ಯತ್ನಿಸುವುದರಿಂದ ಮೆರಿಟ್‌ ಇರುವ ಅನೇಕ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗುತ್ತಿದೆ. ಈ ಗೊಂದಲ ನಿವಾರಿಸಲು ಕೈಪಿಡಿಯೊಂ ದನ್ನು ತಯಾರಿಸಲು ಉದ್ದೇಶಿಸಲಾಗಿದೆ. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿ ಸಿದ ಷರತ್ತು, ದಾಖಲಾತಿ ಪರಿಶೀಲನೆ ವೇಳೆ ವಿದ್ಯಾರ್ಥಿಗಳು ಮಾಡುವ
ತಪ್ಪುಗಳು, ಅರ್ಜಿ ಸಲ್ಲಿಸಲು ಮಾರ್ಗ ಸೂಚಿ ಕೈಪಿಡಿಯಲ್ಲಿ ಇರಲಿದೆ. ಪಿಯು ಕಾಲೇಜುಗಳಲ್ಲಿ ಸೃಜಿಸಲು ಉದ್ದೇಶಿಸಿ ರುವ ಸಿಇಟಿ ಸಹಾಯ ಕೇಂದ್ರಗ ಳಲ್ಲಿ ಈ ಕೈಪಿಡಿಯನ್ನು ವಿತರಿಸಲಾಗುವುದು’ ಎಂದು ರಮ್ಯಾ ತಿಳಿಸಿದರು.

‘ಸೀಟು ಹಂಚಿಕೆಗೆ ದಾಖಲಾತಿಗಳ ಪರಿಶೀಲನೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ಕೆಇಎಗೆ ಬರುತ್ತಾರೆ. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಾತ್ಕಾಲಿಕ ಝೆರಾಕ್ಸ್‌ ಯಂತ್ರ, ಲಘು ಉಪಾಹಾರ ಕೇಂದ್ರ ಸ್ಥಾಪಿಸಲಾಗು ವುದು’ ಎಂದೂ ವಿವರಿಸಿದರು.

----

ಸಿಇಟಿಗೆ ಅರ್ಜಿ ಸಲ್ಲಿಕೆ, ದಾಖಲಾತಿಗಳ ಪರಿಶೀಲನೆ ವ್ಯವಸ್ಥೆ ಸರಳೀಕರಿಸಲಾಗುವುದು.‌ ಏಕರೂಪದ ಅರ್ಜಿ ಶುಲ್ಕ,‌ ಅಂಚೆ ಕಚೇರಿಯಲ್ಲೂ ಶುಲ್ಕ ಪಾವತಿ ವ್ಯವಸ್ಥೆಗೆ ಚಿಂತನೆ ನಡೆದಿದೆ

- ಎಸ್‌. ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ, ಕೆಇಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.