ADVERTISEMENT

ನೆರೆ ಸ್ಪಂದನಕ್ಕೆ ಉಡುಪಿ ಹೆಲ್ಪ್‌ ಡಾಟ್‌ ಕಾಂ

ಶೀಘ್ರವೇ ಪ್ಲೇಸ್ಟೋರ್‌ನಲ್ಲಿ ಲಭ್ಯ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಉಡುಪಿ ಹೆಲ್ಪ್ ಡಾಟ್ ಕಾಂ ಆ್ಯಪ್‌
ಉಡುಪಿ ಹೆಲ್ಪ್ ಡಾಟ್ ಕಾಂ ಆ್ಯಪ್‌   

ಉಡುಪಿ: ಚುನಾವಣಾ ಆಯೋಗದ ‘ಸಿ ವಿಜಿಲ್‌ ಆ್ಯಪ್‌’ ಮಾದರಿಯಲ್ಲಿ ‘ಉಡುಪಿ ಹೆಲ್ಪ್‌ ಡಾಟ್‌ ಕಾಂ’ ಎಂಬ ಆ್ಯಪ್‌ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ಪ್ರಾಕೃತಿಕ ವಿಕೋಪಗಳು ಎದುರಾದಾಗ ಸಾರ್ವಜನಿಕರು ಈ ಆ್ಯಪ್ ಬಳಸಿಕೊಂಡು ನೆರವು ಪಡೆಯಬಹುದು.

ಸಧ್ಯ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ:

ಇದು ಪೈಲಟ್‌ ಯೋಜನೆಯಾಗಿರುವುದರಿಂದ ಉಡುಪಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ನಿವಾಸಿಗಳು ಮಾತ್ರ ಆ್ಯಪ್‌ನ ಪ್ರಯೋಜನ ಪಡೆಯಬಹುದು. ಆ್ಯಪ್‌ನ ಯಶಸ್ಸಿನ ಆಧಾರದ ಮೇಲೆ ಮುಂದೆ ಜಿಲ್ಲೆಗೆ ವಿಸ್ತರಿಸುವ ಯೋಚನೆ ಇದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ADVERTISEMENT

ಆ್ಯಪ್ ಹೇಗೆ ಕಾರ್ಯಾಚರಿಸುತ್ತೆ:

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಾಗ ಫೋಟೊ ಅಥವಾ ವಿಡಿಯೋಗಳನ್ನು ಕಳುಹಿಸಲು ಸೀ ವಿಜಿಲ್‌ ಆ್ಯಪ್‌ನಲ್ಲಿ ಅವಕಾಶ ನೀಡಲಾಗಿತ್ತು. ಅದೇ ಮಾದರಿಯಲ್ಲಿ ‘ಉಡುಪಿ ಹೆಲ್ಫ್‌ ಡಾಟ್‌ ಕಾಂ’ ಆ್ಯಪ್‌ ಸಿದ್ಧಪಡಿಸಲಾಗಿದ್ದು, ಇಲ್ಲಿಯೂ ನಾಗರಿಕರು ನೆರೆ ಸಂಬಂಧಿ ಫೋಟೊ ಅಥವಾ ವಿಡಿಯೋಗಳನ್ನು ಕಳುಹಿಸಬಹುದು.

ಬಳಕೆ ಹೇಗೆ?

ಕರಾವಳಿಯಲ್ಲಿ ಮಳೆಗಾಲ ಬಂದರೆ ನೆರೆ ಬರುವ ಅಪಾಯ ಹೆಚ್ಚಾಗಿರುತ್ತದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಮುರಿದು ಬೀಳುತ್ತವೆ. ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತವೆ. ಇಂತಹ ಸಮಯಗಳಲ್ಲಿ ನಾಗರಿಕರು ಅವಘಡಗಳ ಫೋಟೊ ಅಥವಾ ವಿಡಿಯೋವನ್ನು ಚಿತ್ರೀಕರಿಸಿ ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು.

ಆ್ಯಪ್‌ನಲ್ಲಿ ಜಿಪಿಎಸ್ ಲೊಕೇಷನ್‌ ಇರುವುದರಿಂದ ಎಲ್ಲಿ, ಎಷ್ಟು ಹೊತ್ತಿಗೆ ಅವಘಡ ಸಂಭವಿಸಿದೆ ಎಂಬ ಮಾಹಿತಿ ಸಿಗಲಿದೆ. ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನೆರವು ನೀಡಲಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.

ಕಾರ್ಯಾಚರಣೆ ಹೇಗೆ?

ನಾಗರಿಕರು ನೀಡುವ ದೂರು ಮೊದಲು ನಗರಸಭೆಗೆ ರವಾನೆಯಾಗುತ್ತದೆ. ಬಳಿಕ ಕುಡಿಯುವ ನೀರು ಸರಬರಾಜು ಇಲಾಖೆ, ಅರಣ್ಯ, ಮೆಸ್ಕಾಂ, ಪಿಡಬ್ಲ್ಯುಡಿ ಇಲಾಖೆ, ಹೀಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ತಲುಪತ್ತದೆ. ಯಾವ ಇಲಾಖೆಗೆ ದೂರು ಸಂಬಂಧಿಸಿದೆಯೋ ಅವರು ಪರಿಹರಿಸಬೇಕು ಎಂದು ತಿಳಿಸಿದರು.

ಶೀಘ್ರವೇ ಗೂಗಲ್ ಪ್ಲೇಸ್ಟೋರ್‌ನಲ್ಲಿ

ಆ್ಯಪ್‌ ಸಿದ್ಧಪಡಿಸಿ ಈಚೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರಾತ್ಯಕ್ಷಿಕೆ ನೀಡಿ ಉಡುಪಿ ನಗರದಲ್ಲಿ ಅನುಷ್ಠಾನಕ್ಕೆ ತರಲು ಒಪ್ಪಿಗೆ ಪಡೆಯಲಾಗಿದೆ. ಶೀಘ್ರವೇ ಗೂಗಲ್ ಪ್ಲೇಸ್ಟೋರ್‌ನಲ್ಲಿ ಆ್ಯಪ್‌ ಲಭ್ಯವಾಗಲಿದ್ದು, ಉಡುಪಿ ನಗರದ ನಾಗರಿಕರು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಈ ಆ್ಯಪ್‌ ನೆರೆಗೆ ಸಂಬಂಧಪಟ್ಟದ್ದಾಗಿದ್ದು, ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.