ADVERTISEMENT

ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ರದ್ದು

ನಾಲ್ಕು ವಾರಗಳೊಳಗೆ ಹೊಸ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:40 IST
Last Updated 20 ನವೆಂಬರ್ 2020, 1:40 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ರಾಜ್ಯದ 256 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ ಮಾಡಿ ನಗರಾಭಿವೃದ್ಧಿ ಇಲಾಖೆ ಅಕ್ಟೋಬರ್‌ 8ರಂದು ಹೊರಡಿಸಿದ್ದ ಅಧಿಸೂಚನೆಗಳನ್ನು ಹೈಕೋರ್ಟ್‌ ರದ್ದುಮಾಡಿದೆ.

ಎಲ್ಲ ಹುದ್ದೆಗಳಿಗೂ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ನಾಲ್ಕು ವಾರಗಳೊಳಗೆ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಮೀಸಲಾತಿ ನಿಗದಿಯಲ್ಲಿ ಕಾನೂನು ಉಲ್ಲಂಘನೆ ನಡೆದಿದೆ ಮತ್ತು ರಾಜ್ಯ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ ಅನುಕೂಲಕ್ಕೆ ತಕ್ಕಂತೆ ನಿಯಮ ಉಲ್ಲಂಘಿಸಿ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ಹಲವರು ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಆರ್‌. ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠ ಗುರುವಾರ ತೀರ್ಪು ಪ್ರಕಟಿಸಿತು. ಮೀಸಲಾತಿ ಪಟ್ಟಿಯನ್ನೇ ರದ್ದುಪಡಿಸಿದ ನ್ಯಾಯಪೀಠ, ಅ.8ರ ಅಧಿಸೂಚನೆಯ ಆಧಾರದಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ನಡೆದಿರುವ ಚುನಾವಣೆಗಳ ಫಲಿತಾಂಶವನ್ನು ಅಮಾನತಿನಲ್ಲಿ ಇರಿಸಿತು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಮೀಸಲಾತಿ ನಿಗದಿಯಲ್ಲಿ ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನಿಯಮ–1965 ಮತ್ತು ಮೀಸಲಾತಿ ನಿಗದಿಗಾಗಿಯೇ 2020ರ ಸೆಪ್ಟೆಂಬರ್‌ 9ರಂದು ಪ್ರಕಟಿಸಿದ್ದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿಲ್ಲ. ‘ಮೀಸಲಾತಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಲಾಗಿದೆ’ ಎಂದು ಸರ್ಕಾರ ನೀಡಿರುವ ಒಂದೇ ಕಾರಣವನ್ನು ಆಧರಿಸಿ ಉಳಿದ ಲೋಪಗಳನ್ನು ಮನ್ನಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನಿಯಮ–1965 ಮತ್ತು ಸೆ.9ರ ಮಾರ್ಗಸೂಚಿಗಳ ಅನುಸಾರವೇ ಹೊಸದಾಗಿ ಮೀಸಲಾತಿ ನಿಗದಿ ಮಾಡಬೇಕು. ಈ ಪ್ರಕ್ರಿಯೆಯ ನಡಾವಳಿ, ಟಿಪ್ಪಣಿ ಹಾಳೆಗಳು ಮತ್ತು ಪಟ್ಟಿಗಳನ್ನು ಇರಿಸಿಕೊಂಡಿರಬೇಕು. ನಿಯಮ ಮತ್ತು ಮಾರ್ಗಸೂಚಿಯ ಹೊರತಾಗಿ ಬದಲಾವಣೆ ಮಾಡಿದ್ದಲ್ಲಿ ಸ್ಪಷ್ಟವಾದ ಕಾರಣವನ್ನು ಉಲ್ಲೇಖಿಸಿರಬೇಕು’ ಎಂದು ಹೈಕೋರ್ಟ್‌ ಸೂಚಿಸಿದೆ.

ಹೊಸ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಅ.8ರ ಅಧಿಸೂಚನೆಗೆ ಹೋಲಿಕೆ ಮಾಡಿದಾಗ ಶೇ 50ರಷ್ಟು ಸ್ಥಾನಗಳ ಮೀಸಲಾತಿಯಲ್ಲಿ ಬದಲಾವಣೆ ಇರದೇ ಇದ್ದಲ್ಲಿ ರಾಜ್ಯ ಸರ್ಕಾರ ಈ ಸಂಬಂಧ ರಿಟ್‌ ಅರ್ಜಿ ಸಲ್ಲಿಸಬಹುದು. ಅಂತಹ ಪ್ರಕರಣಗಳಲ್ಲಿ ಈಗಾಗಲೇ ನಡೆದಿರುವ ಚುನಾವಣೆಯ ಫಲಿತಾಂಶವನ್ನು ಊರ್ಜಿತಗೊಳಿಸಿ, ಆಯ್ಕೆಯಾಗಿರುವ ಅಭ್ಯರ್ಥಿಗಳು ಆಡಳಿತ ನಡೆಸಲು ಅವಕಾಶ ಕಲ್ಪಿಸುವಂತೆ ಕೋರಬಹುದು ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದ 256 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಎರಡು ಬಾರಿ ಮೀಸಲಾತಿ ನಿಗದಿಗೊಳಿಸಿ, ರದ್ದು ಮಾಡಲಾಗಿತ್ತು. ಮೂರನೆ ಬಾರಿಗೆ ಅ.8ರಂದು ಅಧಿಸೂಚನೆಗಳನ್ನು ಹೊರಡಿಸಿ, ನ್ಯಾಯಾಲಯದ ಷರತ್ತುಬದ್ಧ ಅನುಮತಿಯೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭಿಸಲಾಗಿತ್ತು.

ಆಯೋಗಕ್ಕೆ ವಹಿಸಲು ಸಲಹೆ

‘ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದಿಂದ ಮುಕ್ತವಾಗಲು ರಾಜ್ಯ ಸರ್ಕಾರ ಈ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ವರ್ಗಾಯಿಸುವುದು ಉತ್ತಮ’ ಎಂದು ಹೈಕೋರ್ಟ್‌ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.