ಗೋಕಾಕ (ಬೆಳಗಾವಿ): ‘ರಾಜ್ಯದ ಎಲ್ಲ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಲ್ಲೂ ಹಾಲು ಖರೀದಿಗೆ ಏಕರೂಪ ದರ ನಿಗದಿಪಡಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಕಲ್ಯಾಣ ಸಂಘದಿಂದ ಫಲಾನುಭವಿಗಳಿಗೆ ಗುರುವಾರ ಚೆಕ್ ವಿತರಿಸಿ ಅವರು ಮಾತನಾಡಿದರು.
‘ಕೆಲವು ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ದರದಲ್ಲಿ ವ್ಯತ್ಯಾಸಗಳಿವೆ. ಅದನ್ನು ಪರಿಹರಿಸಲಾಗುವುದು. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯುವ ಮಹಾಮಂಡಳಿಯ ಸಾಮಾನ್ಯ ಸಭೆಯಲ್ಲಿ ಏಕರೂಪ ದರ ನಿಗದಿಪಡಿಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು.
‘ಕೆಎಂಎಫ್‌ನಿಂದ ಜಾನುವಾರುಗಳನ್ನು ವಿಮಾ ಯೋಜನೆ ವ್ಯಾಪ್ತಿಗೊಳಪಡಿಸಲಾಗಿದೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹಾಲು ಪೂರೈಸುವವರ ಜಾನುವಾರುಗಳು ಮೃತಪಟ್ಟಲ್ಲಿ ₹ 50ಸಾವಿರವರೆಗೆ ವಿಮಾ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.
‘ಕೆಎಂಎಫ್ ವ್ಯಾಪ್ತಿಯ ಸಿಬ್ಬಂದಿಯು ಕೋವಿಡ್ ವೇಳೆ ಪ್ರಾಣವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದಾರೆ. ಬೆಳಿಗ್ಗೆ 4 ಗಂಟೆಯಿಂದಲೇ ಕೆಲಸ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೀಗಾಗಿ, ಸಿಬ್ಬಂದಿಗೆ ಪ್ರತಿ ಲೀಟರ್ ಹಾಲಿಗೆ (ಖರೀದಿಯಾಗುವ) 20 ಪೈಸೆ ನೀಡುವ ಪ್ರಸ್ತಾವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ. ಇದಕ್ಕೆ ವಾರ್ಷಿಕ ₹ 50 ಕೋಟಿ ಬೇಕಾಗುತ್ತದೆ. ಈ ವರ್ಷ ಸರ್ಕಾರವೇ ಆ ವೆಚ್ಚ ಭರಿಸಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.