ADVERTISEMENT

'40 ಪರ್ಸೆಂಟ್‌ ಕಮಿಷನ್' ಕುರಿತ ಪತ್ರಕ್ಕೆ ಕೇಂದ್ರ ಪ್ರತಿಕ್ರಿಯಿಸಿದೆ: ಕೆಂಪಣ್ಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 18:21 IST
Last Updated 24 ಜೂನ್ 2022, 18:21 IST
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ    

ಮೈಸೂರು: ‘ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ 40 ರಷ್ಟು ಲಂಚ ಪಡೆಯಲಾಗುತ್ತಿದೆ ಎಂದು ದೂರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಎರಡು ದಿನದ ಹಿಂದೆ ಅವರ ಕಾರ್ಯಾಲಯವು ಪ್ರತಿಕ್ರಿಯಿಸಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದರು.

‘ಹತ್ತು ದಿನದೊಳಗೆ ಕೇಂದ್ರದಿಂದ ಪ್ರತಿನಿಧಿಯೊಬ್ಬರನ್ನು ಕಳುಹಿಸಿ, ಅವರಿಂದ ವರದಿ ಪಡೆದು ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಲಾಗಿದೆ‘ ಎಂದು ಹೇಳಿದರು. ಅವರು ನಗರದಲ್ಲಿ ಶುಕ್ರವಾರ ಜಿಲ್ಲಾ ಗುತ್ತಿಗೆದಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

‘ಕಾಮಗಾರಿಗಳ ಗುಣಮಟ್ಟ ಕಳಪೆಯಾದರೆ, ಜನರು ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಳ್ಳುತ್ತಾರೆ. ಆದರೆ, ಕಾಮಗಾರಿ ಹಂತದಲ್ಲಿನ ಭ್ರಷ್ಟಾಚಾರಗಳು ಅವರಿಗೆ ಗೊತ್ತಾಗುವುದಿಲ್ಲ. ಇದನ್ನು ಹತ್ತಿರದಿಂದ ಗಮನಿಸಿದ್ದ ನಾನು, ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎರಡು ಬಾರಿ ಪತ್ರ ಬರೆದು ಸಮಸ್ಯೆಗೆ ಸ್ಪಂದಿಸಲು ಕೋರಿದ್ದೆ. ಸೂಕ್ತ ಸ್ಪಂದನೆ ಸಿಗದಿದ್ದುದರಿಂದ ಪ್ರಧಾನಿಗೆ ಅವರಿಗೆ ಪತ್ರ ಬರೆದಿದ್ದೆ. ತಡವಾಗಿಯಾದರೂ ಅವರ ಕಾರ್ಯಾಲಯ ಸ್ಪಂದಿಸಿದೆ‘ ಎಂದರು.

ADVERTISEMENT

ಸಮಸ್ಯೆ ಬಗೆಹರಿಸಲು ಹೋರಾಟ: ‘ಗುತ್ತಿಗೆ ನೀಡುವ ಸಂದರ್ಭದಲ್ಲಿ ಪ್ಯಾಕೇಜ್‌ ಪದ್ಧತಿ ರದ್ದುಗೊಳಿಸಬೇಕು, ಜೇಷ್ಠತೆಯ ಆಧಾರದಲ್ಲಿ ಕಾಮಗಾರಿಗಳ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಸಂಘದಿಂದ ಮಂಡಿಸಿದ್ದ ಬೇಡಿಕೆಗೆ ಸ್ಪಂದಿಸಿರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ಪ್ಯಾಕೇಜ್‌ ಪದ್ಧತಿಯನ್ನು ರದ್ದು ಪಡಿಸಬೇಕು ಎಂದು ಸಂಘವು ಹೈಕೋರ್ಟ್‌ನ ಮೆಟ್ಟಿಲೇರಿದೆ. ಈ ಸಂಬಂಧ ಮಂಗಳವಾರ ತೀರ್ಪು ಹೊರಬೀಳುವ ನಿರೀಕ್ಷೆಯಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.