ADVERTISEMENT

ಅಡಿಕೆ ‘ಕ್ಯಾನ್ಸರ್‌ಕಾರಕ’ ಎಂಬುದು ಭ್ರಾಂತಿ: ಕೇಂದ್ರ ಸಚಿವ ಶಿವರಾಜ್‌ ಸಿಂಗ್

17 ಸಂಸ್ಥೆಗಳಿಗೆ ಸಂಶೋಧನೆಯ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 12:39 IST
Last Updated 18 ಜನವರಿ 2025, 12:39 IST
<div class="paragraphs"><p>ಸಾಗರದಲ್ಲಿ ಶನಿವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬೇಯಿಸಿದ ಅಡಿಕೆ ಪ್ರದರ್ಶಿಸಿದರು</p></div>

ಸಾಗರದಲ್ಲಿ ಶನಿವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬೇಯಿಸಿದ ಅಡಿಕೆ ಪ್ರದರ್ಶಿಸಿದರು

   

ಶಿವಮೊಗ್ಗ: ‘ಅಡಿಕೆ ‘ಕ್ಯಾನ್ಸರ್‌ಕಾರಕ’ ಎಂಬುದೊಂದು ಭ್ರಾಂತಿ. ಅದನ್ನು ತೊಡೆದು ಹಾಕಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಸೆಂಟರ್‌ ಫಾರ್‌ ಸೆಲ್ಯೂಲರ್ ಅಂಡ್‌ ಮಾಲಿಕ್ಯುಲರ್‌ ಬಯಾಲಜಿ (ಸಿಸಿಎಂಬಿ)ಯಂತಹ ರಾಷ್ಟ್ರೀಯ ಮಟ್ಟದ 17 ಸಂಶೋಧನಾ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಕೇಂದ್ರದ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಹೇಳಿದರು.

ಸಾಗರದಲ್ಲಿ ಶನಿವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

ಅಡಿಕೆ ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿ ಆಶ್ಚರ್ಯ ಮೂಡಿಸಿದೆ. ಅದರ ಸತ್ಯಾಸತ್ಯತೆ ಸಂಶೋಧನೆ ನಡೆಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವಂತೆ ಆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಫಲದಲ್ಲಿ ವಿಷ ಸೇರಿಸಿ (ಗುಟ್ಕಾ) ತಿಂದಲ್ಲಿ ಅಡಿಕೆಯದ್ದು ಏನು ದೋಷ ಎಂದು ಅವರು ಪ್ರಶ್ನಿಸಿದರು.

ವಿಜ್ಞಾನಿಗಳ ಸಮಿತಿ ರಚನೆ:

ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ, ಹಳದಿ ರೋಗ ಹಾಗೂ ಕೊಳೆ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಷ್ಟ್ರಮಟ್ಟದಲ್ಲಿ ವಿಜ್ಞಾನಿಗಳ ಸಮಿತಿ ರಚಿಸಲಾಗಿದೆ. ಸಮಿತಿಯ ಶಿಫಾರಸುಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ₹67 ಕೋಟಿ ತೆಗೆದಿಡಲಾಗುವುದು. ವೈರಸ್ ಬಾಧಿಸದ ಅಡಿಕೆ ತಳಿಯ ಸಂಶೋಧನೆಯೂ ಪ್ರಗತಿಯಲ್ಲಿದೆ ಎಂದರು.

ಅಡಿಕೆ ಆಮದು ತಡೆಯಲು ಈ ಹಿಂದೆ ಕೆಜಿಗೆ ₹251 ಇದ್ದ ಆಮದು ಶುಲ್ಕವನ್ನು ನರೇಂದ್ರ ಮೋದಿ ಸರ್ಕಾರ ₹351ಕ್ಕೆ ಹೆಚ್ಚಳಗೊಳಿಸಿದೆ. ಅಗತ್ಯಬಿದ್ದರೆ ಅದನ್ನು ಇನ್ನೂ ಹೆಚ್ಚಳಗೊಳಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಧಾನ್ಯಗಳ ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಮೆಕ್ಕೆಜೋಳ, ತೊಗರಿ, ಉದ್ದು, ಚನ್ನಂಗಿ ಬೇಳೆ (ಮಸೂರ್) ಶೇ 100 ರಷ್ಟು ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲಿದ್ದೇವೆ.
ಶಿವರಾಜ್‌ಸಿಂಗ್ ಚೌಹಾಣ್‌, ಕೇಂದ್ರ ಕೃಷಿ ಸಚಿವ

ದೆಹಲಿಗೆ ಮರಳಿದ ನಂತರ ಸೀಮಾ ಶುಲ್ಕ ಮಂಡಳಿ ಜೊತೆ ಸಭೆ ನಡೆಸುವೆ. ಕಳ್ಳ ಮಾರ್ಗದಲ್ಲಿ ದೇಶದೊಳಗೆ ಅಡಿಕೆ ಸಾಗಣೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಸೂಚಿಸುವೆ ಎಂದು ಶಿವರಾಜ ಸಿಂಗ್‌ ಚೌಹಾಣ್ ಭರವಸೆ ನೀಡಿದರು.

‘ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಅಡಿಕೆ ಬೆಳೆಗಾರರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರವೂ ಕೈಜೋಡಿಸಲಿ’ ಎಂದು ಹೇಳಿದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.

ಬೆಳೆಗಾರರ ಆತಂಕ ದೂರ ಮಾಡಿ..

‘ಬೆಳೆಗಾರರಲ್ಲಿರುವ ಆತಂಕ ದೂರ ಮಾಡಲು ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಲಿ. ತೀರ್ಥಹಳ್ಳಿಯಲ್ಲಿ ₹500 ಕೋಟಿ ವೆಚ್ಚದಲ್ಲಿ ರಾಷ್ಟ್ರಮಟ್ಟದ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಆರು ವರ್ಷಗಳ ಹಿಂದೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದರು. ಆ ಭರವಸೆ ಈಡೇರಿಸಿ’ ಎಂದು ಕೇಂದ್ರ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಅವರಿಗೆ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.