ಕಿರಣ್ ರಿಜಿಜು
ಬೆಂಗಳೂರು: ‘ರಾಜಕೀಯ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಅನಪೇಕ್ಷಿತ ಗದ್ದಲ ಮತ್ತು ರಾಜಕೀಯ ಪ್ರಹಸನಗಳ ಮೂಲಕ ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸಲು ಪ್ರಯತ್ನಿಸಿದರೆ ಅದರಿಂದ ಸದಸ್ಯರಿಗೆ ನಷ್ಟವೇ ಹೊರತು, ಸರ್ಕಾರಕ್ಕೆ ಅಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
ಬೆಂಗಳೂರು ವಕೀಲರ ಸಂಘ ಶನಿವಾರ ಆಯೋಜಿಸಿದ್ದ ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸಂಸದೀಯ ವ್ಯವಸ್ಥೆ’ ವಿಷಯದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷವು ತನ್ನ ನಾಯಕನ ಇರಾದೆಯ ಮೇರೆಗೆ ವರ್ತಿಸುತ್ತಿದ್ದ ಕಾರಣ ಸದನ ಕಲಾಪ ಸಮರ್ಪಕವಾಗಿ ನಡೆಯಲಿಲ್ಲ. ಸರ್ಕಾರದ ಬಳಿ ಬಹುಮತವಿದ್ದು ಅಗತ್ಯ ಬಿದ್ದಾಗ ಮಸೂದೆಗಳಿಗೆ ಒಪ್ಪಿಗೆ ಪಡೆದುಕೊಳ್ಳಲು ಸಮರ್ಥವಾಗಿದೆ’ ಎಂದರು.
ಪದಾಂಕಿತ ಹಿರಿಯ ವಕೀಲ ಬಿ.ವಿ.ಆಚಾರ್ಯ ಮಾತನಾಡಿ, ‘ಇಂದು ಸಂಸತ್ತಿನ ಚರ್ಚೆಗಳ ಗುಣಮಟ್ಟ ಕುಸಿದಿದೆ. ಸದಸ್ಯರು ಸಂಸತ್ತಿನ ಒಳಗೆ ಚರ್ಚೆ ಮಾಡುವುದನ್ನು ಬಿಟ್ಟು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಸಮರ್ಪಕ ಚರ್ಚೆಗಳೇ ನಡೆಯದೆ ಮಸೂದೆಗಳು ಅಂಗೀಕಾರ ಪಡೆಯುತ್ತಿವೆ’ ಎಂದರು.
‘ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ನೇಮಕವೂ ಸರಿಯಾಗಿ ನಡೆಯುತ್ತಿಲ್ಲ. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಒಬ್ಬರು ಮಾತ್ರ ಮಹಿಳಾ ನ್ಯಾಯಮೂರ್ತಿ ಇದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.