ADVERTISEMENT

UPSC | ಹಿಂದಿ ಪ್ರಶ್ನೆಪತ್ರಿಕೆ: ಕನ್ನಡಿಗರ ಅಸಮಾಧಾನ

ಯುಪಿಎಸ್‌ಸಿಯಿಂದ ಹಿಂದಿ ಹೇರಿಕೆ ಆರೋಪ: ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:01 IST
Last Updated 4 ಅಕ್ಟೋಬರ್ 2020, 16:01 IST
ಬೆಂಗಳೂರಿನ ಆರ್.ವಿ. ಟೀಚರ್ಸ್‌ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಪ್ರವೇಶಪತ್ರ ಪರಿಶೀಲನೆ ನಡೆಸಿದ ಸಿಬ್ಬಂದಿ ಪ್ರಜಾವಾಣಿ ಚಿತ್ರ
ಬೆಂಗಳೂರಿನ ಆರ್.ವಿ. ಟೀಚರ್ಸ್‌ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಪ್ರವೇಶಪತ್ರ ಪರಿಶೀಲನೆ ನಡೆಸಿದ ಸಿಬ್ಬಂದಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ಭಾನುವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ನೀಡಿದ್ದರ ವಿರುದ್ಧ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದರು.

‘ಮುಖ್ಯಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶವಿದೆ. ಆದರೆ, ಮುಖ್ಯಪರೀಕ್ಷೆಗೆ ಅರ್ಹತೆ ಪಡೆಯಲು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲೇಬೇಕು.ಕನ್ನಡದಲ್ಲೇ ಪೂರ್ವಭಾವಿ ಪರೀಕ್ಷೆ ಬರೆಯುವ ಅವಕಾಶ ದೊರಕದ ಹೊರತು, ಮುಖ್ಯಪರೀಕ್ಷೆಯಲ್ಲಿ ಮಾತ್ರ ಕನ್ನಡ ಇದ್ದರೆ ಯಾವ ಪ್ರಯೋಜನವೂ ಆಗುವುದಿಲ್ಲ’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಯುಪಿಎಸ್‌ಸಿ ಉದ್ಯೋಗಾವಕಾಶಗಳಿಂದ ದಕ್ಷಿಣ ಭಾರತೀಯರನ್ನು ಹೊರಗಿಡುವ ಈ ಹುನ್ನಾರವನ್ನು ಒಕ್ಕೊರಲಿನಿಂದ ವಿರೋಧಿಸಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಆಯಾ ರಾಜ್ಯಗಳು ತಮ್ಮ ಆಡಳಿತಕ್ಕೆ ಬೇಕಾದ ಎಲ್ಲ ಹುದ್ದೆಗಳಿಗೆ ತಮ್ಮದೇ ರಾಜ್ಯದವರನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಬೇಕಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದಲೇ ರಾಜ್ಯದ ಐಎಎಸ್‌, ಐಪಿಎಸ್‌ ಮಟ್ಟದ ಹುದ್ದೆಗಳಿಗೆ ಕನ್ನಡಿಗರಿಗೆ ಪರೀಕ್ಷೆ ನಡೆಸಿ, ನೇಮಕ ಮಾಡಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಬರೆದುಕೊಂಡಿದ್ದಾರೆ.

#stophindiimposition, #kannadaQPinUpsc,#serveInMyLanguage #KannadaInIASPrelims ಹ್ಯಾಶ್‌ಟ್ಯಾಗ್‌ಗಳ ಮೂಲಕ ನಡೆದ ಅಭಿಯಾನದಲ್ಲಿ ಸಾವಿರಾರು ಜನ ಪ್ರತಿಕ್ರಿಯಿಸಿದರು. ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.