ADVERTISEMENT

ಕರ್ತವ್ಯಲೋಪ ಆರೋಪ: ನಗರಾಭಿವೃದ್ದಿ ಇಲಾಖೆಯ ಉಪಕಾರ್ಯದರ್ಶಿ ಎಲಿಷ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 16:16 IST
Last Updated 22 ಏಪ್ರಿಲ್ 2022, 16:16 IST
   

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಅವರನ್ನು ಸರ್ಕಾರ ಅಮಾನತು ಮಾಡಿದೆ.

ಕಡತ ವಿಲೇವಾರಿ ವೇಳೆ ವಿಳಂಬ ಧೋರಣೆ ಅನುಸರಿಸಿದ ಹಾಗೂ ಸರ್ಕಾರಿ ನೌಕರರ ತರವಲ್ಲದ ವರ್ತನೆ ತೋರಿದ ಆರೋಪ ಎದುರಿಸುತ್ತಿರುವ ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ–3 ಎಲಿಷ ಆ್ಯಂಡ್ರೂಸ್‌ ಅವರನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಕಡತಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಸತತವಾಗಿ ನಿರ್ದೇಶನ ನೀಡಿದ್ದರೂ ಎಲಿಷಾ ಅವರು ನಿರ್ಲಕ್ಷಿಸಿದ್ದಾರೆ. 1966ರ ಕರ್ನಾಟಕ ನಾಗರಿಕೆ ಸೇವೆ (ನಡತೆ) ನಿಯಮ 3 (1) ಅನ್ನು ಉಲ್ಲಂಘಿಸುವ ಮೂಲಕ ಅವರು ಕರ್ತವ್ಯಲೋಪ ಎಸಗಿದ್ದಾರೆ. ಈ ಆರೋಪಗಳನ್ನು ಇದುವರೆಗೂ ಅವರು ಅಲ್ಲಗಳೆದಿಲ್ಲ. ಹಾಗಾಗಿ ಅವರ ಮೇಲೆ ತಕ್ಷಣದಿಂದಲೇ ಇಲಾಖಾ ವಿಚಾರಣೆ ಆರಂಭಿಸಬೇಕು. ಇಲಾಖಾ ವಿಚಾರಣೆಗೆ ಅವರು ಅಡ್ಡಿಪಡಿಸುವ ಮತ್ತು ಸಾಕ್ಷ್ಯದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರನ್ನು ತಕ್ಷಣದಿಂದ ಅಮಾನತುಗೊಳಿಸಬೇಕು’ ಎಂದೂ ರಾಕೇಶ್‌ ಸಿಂಗ್‌ ಪತ್ರದಲ್ಲಿ ತಿಳಿಸಿದ್ದರು.

ADVERTISEMENT

‘ಎಂಜಿನಿಯರ್‌ಗಳ ಬಡ್ತಿಗೆ ₹4.5 ಕೋಟಿ ಲಂಚ; ಸಿ.ಎಂ.ಗೆ ದೂರು’ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯ 2022ರ ಮಾರ್ಚ್‌ 30ರ ಸಂಚಿಕೆಯಲ್ಲಿ ‌ಪ್ರಕಟವಾದ ವಿಶೇಷ ವರದಿಯನ್ನೂ ಪತ್ರದ ಜೊತೆಗೆ ರಾಕೇಶ್‌ ಸಿಂಗ್‌ ಲಗತ್ತಿಸಿದ್ದರು ‘ಬಿಬಿಎಂಪಿ ಎಂಜಿನಿಯರ್‌ಗಳ ಬಡ್ತಿಗೆ ಮುಖ್ಯಮಂತ್ರಿ ಹೆಸರಿನಲ್ಲೇ ₹4.50 ಕೋಟಿ ಲಂಚ ಪಡೆಯಲಾಗಿದೆ. ಇದರಲ್ಲಿ ನಗರಾಭಿವೃದ್ಧಿ ಇಲಾಖೆಯ ಕೆಲವು ಅಧಿಕಾರಿಗಳು ಭಾಗಿಯಾಗಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ದೂರು ನೀಡಿತ್ತು.

ಬಿಬಿಎಂಪಿಯ ವಿವಿಧ ವೃಂದಗಳ ಹುದ್ದೆಗಳಿಗೆ ವಿವಿಧ ಇಲಾಖೆಗಳ ಎರವಲು ಸೇವೆ ಮೇಲೆ ನಿಯೋಜನೆ ಮಾಡಲು 1976ರ ಕೆಎಂಸಿ ಕಾಯ್ದೆಯಡಿ ಹೊರಡಿಸಿದ ನಿಯೋಜನಾ ಮಾರ್ಗಸೂಚಿ ಬದಲು 2020ರ ಬಿಬಿಎಂಪಿ ಕಾಯ್ದೆಯಡಿ ರೂಪಿಸಲಾದ ಹೊಸ ನಿಯೊಜನಾ ನೀತಿ/ ಮಾರ್ಗಸೂಚಿ ಹೊರಡಿಸಲು ಎರಡು ತಿಂಗಳು ವಿಳಂಬ ಮಾಡಿರುವ ಆರೋಪ ಎಲಿಷ ಆ್ಯಂಡ್ರೂಸ್‌ ಅವರ ಮೇಲಿದೆ. ಬಿಬಿಎಂಪಿಗೆ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ, ಅಧಿಕಾರಿಗಳನ್ನು ಬಿಬಿಎಂಪಿ ಸೇವೆಯಲ್ಲಿ ಮುಂದುವರಿಸುವ ಹಾಗೂ ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರು ಮಾಡುವ ಕುರಿತ 13 ಕಡತಗಳ ವಿಲೇವಾರಿಯಲ್ಲಿ ಅವರು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂಬ ಪಟ್ಟಿಯನ್ನೂ ಪತ್ರದ ಜೊತೆ ಎಸಿಎಸ್‌ ಅವರು ಲಗತ್ತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.