ಬೆಂಗಳೂರು
ಬೆಂಗಳೂರು: ‘ನಗರ ಪ್ರದೇಶಗಳಲ್ಲಿನ ಭೂ ಸ್ವತ್ತುಗಳನ್ನು ನಗದೀಕರಿಸುವ ಮೂಲಕ ಆದಾಯ ಗಳಿಕೆ ಸಾಮರ್ಥ್ಯವನ್ನು ಹೆಚ್ಚಿಸಬಹುದು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದ ‘ಸಂಪನ್ಮೂಲ ಕ್ರೋಡೀಕರಣ ಸಮಿತಿ’ಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಮಿತಿಯು ಕೈಗೊಂಡ ಸಮಗ್ರ ವಿಶ್ಲೇಷಣೆ ಮತ್ತು ಶಿಫಾರಸುಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿತು.
ತೆರಿಗೆಯೇತರ ಆದಾಯ ಮತ್ತು ಆಸ್ತಿ ನಗದೀಕರಣದ ಮೇಲ್ವಿಚಾರಣೆ ಮಾಡಲು ಆರ್ಥಿಕ ಇಲಾಖೆಯಲ್ಲಿ ಆರ್ಥಿಕ ನೀತಿ ವಿಭಾಗ ರಚಿಸಬೇಕು ಎಂದೂ ಸಮಿತಿ ಸಲಹೆ ನೀಡಿದೆ.
ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಅತ್ಯುತ್ತಮ ಆರ್ಥಿಕ ಬೆಳವಣಿಗೆ ಹೊಂದಿದೆ. ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ಸ್ವಂತ ತೆರಿಗೆ ಪಾಲು ಶೇ 60ರಿಂದ ಶೇ 70 ರಷ್ಟಿದೆ. ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಮೋಟಾರು ವಾಹನ ತೆರಿಗೆಗಳು ರಾಜಸ್ವದ ಪ್ರಮುಖ ಸ್ವೀಕೃತಿಗಳಾಗಿದ್ದು, ರಾಜ್ಯದ ಸ್ವಂತ ತೆರಿಗೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದಾಯ ಹೆಚ್ಚಿಸುವಲ್ಲಿನ ಪ್ರಮುಖ ಸವಾಲುಗಳನ್ನು ಸಮಿತಿಯು ವರದಿಯಲ್ಲಿ ಪಟ್ಟಿ ಮಾಡಿದೆ. ರಾಜ್ಯದ ತೆರಿಗೆಯೇತರ ಆದಾಯ ಕಡಿಮೆ ಇದೆ. ಬಳಕೆದಾರರ ಶುಲ್ಕಗಳು ಹಾಗೂ ಸರ್ಕಾರಿ ಸ್ವತ್ತುಗಳಿಂದ, ಗುತ್ತಿಗೆ ಮತ್ತು ನಗದೀಕರಣದಿಂದ ಹೆಚ್ಚಿನ ರಾಜಸ್ವ ಸೃಜಿಸಲು ಅವಕಾಶಗಳಿವೆ. ಆಸ್ತಿ ದತ್ತಾಂಶಗಳ ಉತ್ತಮ ನಿರ್ವಹಣೆ ಮತ್ತು ಸರ್ಕಾರಿ ಆಸ್ತಿಗಳ ವ್ಯವಸ್ಥಿತ ಸಮೀಕ್ಷೆ ಮಾಡಬೇಕಾದ ಅಗತ್ಯವಿದೆ. ಮಾರ್ಗಸೂಚಿ ದರಗಳು ಮತ್ತು ಆಸ್ತಿ ತೆರಿಗೆಗಳ ಪರಿಷ್ಕರಣೆಯಿಂದಾಗಿ ಸ್ಥಳೀಯ ಸಂಸ್ಥೆಗಳು ರಾಜಸ್ವ ಸೃಜಿಸಲು ಅವಕಾಶವಿದೆ ಎಂದೂ ವರದಿಯಲ್ಲಿದೆ.
‘ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಅಗತ್ಯವಾದ ಅನುದಾನ ಮೀಸಲಿಡಬೇಕು’ ಎಂದು ಸಲಹೆ ನೀಡಿರುವ ಸಮಿತಿ, ವೆಚ್ಚವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಅಗತ್ಯದ ಬಗ್ಗೆಯೂ ವರದಿಯಲ್ಲಿ ವಿವರಿಸಿದೆ.
ರಾಜ್ಯದ ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ವ್ಯವಸ್ಥಿತ ಮತ್ತು ಕ್ರಮಬದ್ಧ ಸುಧಾರಣೆಗಳು ಅತೀ ಅಗತ್ಯವಾಗಿದೆ ಎಂದೂ ಸಮಿತಿ ಪ್ರತಿಪಾದಿಸಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವ ಉದ್ದೇಶದಿಂದ 2024ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರ ಈ ಸಮಿತಿಯನ್ನು ರಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.