ADVERTISEMENT

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ, ನೀರಿನ ತೆರಿಗೆ ಸಂಗ್ರಹ ಶೇ 90 ಹೆಚ್ಚಳದ ಗುರಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 14:16 IST
Last Updated 11 ಆಗಸ್ಟ್ 2022, 14:16 IST
   

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ಮತ್ತು ನೀರಿನ ತೆರಿಗೆ ಸಂಗ್ರಹ ಪ್ರಮಾಣವನ್ನು ಶೇ 90 ಕ್ಕೆ ಏರಿಸಲು ಗುರಿ ನಿಗದಿ ಮಾಡಲಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸಿಮ್ಯಾಕ್‌ ಸಂಸ್ಥೆಯು ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಉತ್ತಮ ಪದ್ಧತಿಗಳ ದಾಖಲೀಕರಣವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕೊರೊನಾ ನಂತರ ಆಸ್ತಿ ಮತ್ತು ನೀರಿನ ತೆರಿಗೆ ಸಂಗ್ರಹ ಶೇ 50 ರಿಂದ ಶೇ 60 ಕ್ಕೆ ಕುಸಿದಿತ್ತು. ಈ ಪ್ರಮಾಣವನ್ನು ಶೇ 90 ಕ್ಕೆ ಏರಿಸಿದಾಗ ಮಾತ್ರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯ ಎಂದು ತಿಳಿಸಿದರು.

ಪಟ್ಟಣ ಮತ್ತು ನಗರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕುನುಗುಣವಾಗಿ ಜನಸಂಖ್ಯೆ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳು ನಾಗರೀಕ ಸೌಲಭ್ಯಗಳನ್ನು ಕಲ್ಪಿಸಲು ಸಜ್ಜಾಗಬೇಕಿದೆ ಎಂದು ಸಚಿವರು ಸೂಚಿಸಿದರು.

ADVERTISEMENT

₹3,885 ಕೋಟಿಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕಾಮಗಾರಿಗಳು ಸದ್ಯದಲ್ಲೇ ಆರಂಭವಾಗಲಿವೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಆಗಲಿದೆ ಎಂದು ಎಂಟಿಬಿ ನಾಗರಾಜು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶೇಷ ಪ್ರಶಸ್ತಿಗೆ ಪಾತ್ರವಾದ ಬಿ.ಡಬ್ಲ್ಯೂಎಸ್.ಎಸ್.ಬಿ., ಕೆ.ಎಸ್.ಆರ್.ಟಿ.ಸಿ., ಬಳ್ಳಾರಿ ಹಾಗೂ ಮೈಸೂರು ಮಹಾನಗರ ಪಾಲಿಕೆಗಳು ಹಾಗೂ ಮುಳಗುಂದ, ತರೀಕೆರೆ ಮತ್ತು ಉಡುಪಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಿಗೆ ಕೆ.ಪಿ.ಎಸ್‌.ಸಿ. ಮೂಲಕನೇಮಕಗೊಂಡಿರುವ 52 ಕಿರಿಯ ಇಂಜಿನಿಯ‌ರ್‌ಗಳಲ್ಲಿ ಕೆಲವರಿಗೆ ಇದೇ ಸಂದರ್ಭದಲ್ಲಿ ಸಚಿವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.