ಮುಳಗುಂದದ ಕೃಷಿ ಸಹಕಾರ ಸಂಘದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ರೈತರಿಗೆ ಯೂರಿಯಾ ವಿತರಿಸಲಾಯಿತು
ಮುಳಗುಂದ (ಗದಗ ಜಿಲ್ಲೆ): ಇಲ್ಲಿನ ಕೃಷಿ ಸಹಕಾರ ಸಂಘದಲ್ಲಿ ಪೋಲೀಸ್ ಬಂದೋಬಸ್ತ್‌ನಲ್ಲಿ ಮಂಗಳವಾರ ರೈತರಿಗೆ ಯೂರಿಯಾ ವಿತರಿಸಲಾಯಿತು.
ಯೂರಿಯಾಗೆ ಅಭಾವ ಇರುವುದರಿಂದ ರೈತರು ಪರದಾಡುವಂತಾಗಿದೆ. ಮಂಗಳವಾರ ಸ್ಥಳೀಯ ಸಹಕಾರ ಸಂಘಕ್ಕೆ 55 ಟನ್ ಗೊಬ್ಬರ ಬಂದಿದೆ. ನಸುಕಿನ 4ರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಖರೀದಿಗೆ ಬಂದಿದ್ದರು. ಅಹಿತಕರ ಘಟನೆಗೆ ಆಸ್ಪದ
ವಾಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಒಬ್ಬರಿಗೆ ತಲಾ 2 ಚೀಲದಂತೆ ರಸಗೊಬ್ಬರ ವಿತರಿಸಲಾಯಿತು.
‘ಬೆಳೆಗಳ ರಕ್ಷಣೆಗೆ ಯೂರಿಯಾ ಬೇಕು. ಒಬ್ಬೊಬ್ಬರಿಗೆ ಎರಡು ಚೀಲ ಕೊಡಲಾಗುತ್ತಿದೆ. 4 ಎಕರೆಗೂ ಹೆಚ್ಚಿನ ಜಮೀನು ಇದ್ದಲ್ಲಿ ಇದು ಸಾಕಾಗುವುದಿಲ್ಲ. ಯೂರಿಯಾ ಸಮರ್ಪಕ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ರೈತ ಬಸವರಾಜ ಕರಿಗಾರ ತಿಳಿಸಿದರು.
ಕೊಪ್ಪಳ: ಯೂರಿಯಾ ರಸಗೊಬ್ಬರಕ್ಕಾಗಿ ತಾಲ್ಲೂಕಿನ ಮುದ್ದಾಬಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ಐದು ಗ್ರಾಮಗಳ ಹಲವು ರೈತರು ಸೋಮವಾರ ರಾತ್ರಿಯಿಂದಲೇ ಮಲಗಿದ್ದರು. ಅವರಲ್ಲಿ ಕೆಲವರಿಗೆ ಗೊಬ್ಬರ ಲಭಿಸಿದರೆ, ಉಳಿದವರು ಬರಿಗೈಯಲ್ಲಿ ವಾಪಸ್ ಹೋದರು.
ಸೋಮವಾರ ರಾತ್ರಿ 11 ಗಂಟೆಯಿಂದಲೇ ಗೊಂಡಬಾಳ, ಹೊಸಳ್ಳಿ, ಬಹದ್ದೂರ್ ಬಂಡಿ, ಮುದ್ದಾಬಳ್ಳಿ ಹಾಗೂ ಹ್ಯಾಟಿ ಗ್ರಾಮದ ರೈತರು ಮಲಗಿದ್ದರು. ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಆಧಾರ್ ಕಾರ್ಡ್ ಹಾಗೂ ಇಟ್ಟಿಗೆ ಸರತಿಗೆ ಇಟ್ಟಿದ್ದರು. ಮಂಗಳವಾರ ಬೆಳಗಿನ ಜಾವ ರೈತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಸೊಸೈಟಿಗೆ ಯೂರಿಯಾದ 450 ಚೀಲಗಳಷ್ಟೇ ಬಂದಿದ್ದರಿಂದ ಎಲ್ಲರಿಗೂ ಸಿಗಲಿಲ್ಲ.
‘ಪ್ರತಿ ಆಧಾರ್ ಕಾರ್ಡ್‌ಗೆ ಎರಡು ಚೀಲ ಮಾತ್ರ ಯೂರಿಯಾ ಕೊಡಲಾಗುತ್ತದೆ. ಸರ್ಕಾರ ಕಡಿಮೆ ಗೊಬ್ಬರ ಕೊಟ್ಟು ರೈತರ ನಡುವೆಯೇ ಜಗಳ ಹಚ್ಚುತ್ತಿದೆ’ ಎಂದು ಕೆಲ ರೈತರು ಬೇಸರ ವ್ಯಕ್ತಪಡಿಸಿದರು.
ಯೂರಿಯಾ ಅಭಾವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ‘ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
1ಕ್ಕೆ ಕೊಪ್ಪಳ ಬಂದ್
ಹುಬ್ಬಳ್ಳಿ: ‘ರಾಜ್ಯದಲ್ಲಿ 2.50 ಲಕ್ಷ ಟನ್ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗಿದ್ದು, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಇದನ್ನು ಖಂಡಿಸಿ ಆಗಸ್ಟ್ 1ರಂದು ಕೊಪ್ಪಳ ಬಂದ್ ಮಾಡಲಾಗುವುದು ಮತ್ತು ಇತರ ಜಿಲ್ಲೆಗಳಲ್ಲೂ ಪ್ರತಿಭಟಿಸಲಾಗುವುದು’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
‘ಎನ್.ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾಗಲು ಅರ್ಹರಲ್ಲ. ಅವರಿಗೆ ರಾಜ್ಯದ ಯಾವ ಭಾಗದಲ್ಲಿ ಎಷ್ಟು ಮಳೆಯಾಗುತ್ತದೆ? ಯಾವ ಬೆಳೆ ಬೆಳೆಯುತ್ತಾರೆ? ಎಂಬ ಕನಿಷ್ಠ ಜ್ಞಾನವೂ ಇಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ತೋಟಗಾರಿಕೆ ಬೆಳೆಗಳಿಗೆ ಯೂರಿಯಾ ಗೊಬ್ಬರ ಹೆಚ್ಚು ಬೇಡ. ಅಗತ್ಯ ಇಲ್ಲದಿರುವ ಜಿಲ್ಲೆಗಳಲ್ಲಿ ಶೇಖರಣೆಯಾದ ಯೂರಿಯಾ ಗೊಬ್ಬರವನ್ನು ಪಡೆದು ಅವಶ್ಯವಿರುವ ಉತ್ತರ ಕರ್ನಾಟಕ ಭಾಗದ 10 ಜಿಲ್ಲೆಗಳ ರೈತರಿಗೆ ವಿತರಿಸಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.