ADVERTISEMENT

ಉರಿಗೌಡ, ನಂಜೇಗೌಡ ವಿಚಾರವಾಗಿ ಸಂಧಾನ ಬೇಡ: ನಿರ್ಮಲಾನಂದನಾಥರಿಗೆ ಡಿ.ಕೆ.ಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:51 IST
Last Updated 20 ಮಾರ್ಚ್ 2023, 6:51 IST
   

ಬೆಳಗಾವಿ: ‘ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಪಾತ್ರಗಳನ್ನು ಸೃಷ್ಟಿ ಮಾಡಿ, ಟಿಪ್ಪು ಸುಲ್ತಾನ್‌ ಇತಿಹಾಸವನ್ನೇ ತಿರುಚಲು ಹೊರಟವರಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರೇ ಬಹಿಷ್ಕಾರ ಹಾಕಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾರೋ ನಿರ್ಮಾಪಕ, ಪಕ್ಷದವರು ಸಂಧಾನ ಸಭೆ ಕರೆದರೆ ಶ್ರೀಗಳು ಒಪ್ಪಕೂಡದು. ಒಂದು ವೇಳೆ ಸಭೆ ಕರೆದರೆ ಶ್ರೀಗಳು ಸಮಾಜಕ್ಕೇ ಅವಮಾನ ಮಾಡಿದಂತೆ ಆಗುತ್ತದೆ. ಒಕ್ಕಲಿಗರ ಸಮಾಜ ಹೋರಾಟ ಮಾಡಿದ, ಸ್ವಾಭಿಮಾನಿ ಸಮಾಜ. ಈ ಸ್ವಾಭಿಮಾನವನ್ನು ಶ್ರೀಗಳು ಉಳಿಸಿಕೊಳ್ಳಬೇಕು’ ಎಂದೂ ಆಗ್ರಹಿಸಿದರು.

‘ಇತಿಹಾಸ ಹಾಳು ಮಾಡುವ ಪಕ್ಷದ ವಿರುದ್ಧ ಕನ್ನಡ ಸಂಘಟನೆಗಳು, ಸಾಹಿತಿಗಳ ಹೋರಾಟ ಮಾಡಬೇಕು, ಸ್ವಾಮೀಜಿ ಅವರೇ ಮುಂಚೂಣಿ ವಹಿಸಬೇಕು. ಎಲ್ಲ ಸಮಾಜದ ಶ್ರೀಗಳಿಗೆ ನಾನು ಮನವಿ ಮಾಡುತ್ತೇನೆ; ಇದನ್ನು ಹೀಗೇ ಬಿಟ್ಟರೆ ರಾಜ್ಯಕ್ಕೆ ದೊಡ್ಡ ಕಳಂಕ ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯ ವಾಟ್ಸ್‌ಆ್ಯಪ್‌ ಯೂನಿವರ್ಸಿಟಿಯನ್ನು ಖಂಡಿಸಬೇಕು’ ಎಂದರು.

ADVERTISEMENT

‘ಈ ಹಿಂದೆ ಬಸವಣ್ಣ, ಕುವೆಂಪು, ಡಾ.ಅಂಬೇಡ್ಕರ್, ನಾರಾಯಣ ಗುರು ಅವರ ಇತಿಹಾಸವನ್ನೂ ಬಿಜೆಪಿ ನಾಯಕರು ತಿರುಚಿದರು. ಆಗಲೂ ಹೋರಾಟ ಮಾಡಿದ್ದೇವೆ. ಈಗ ಟಿಪ್ಪು ಸುಲ್ತಾನ್‌ ಹಿಂದೆ ಬಿದ್ದಿದ್ದಾರೆ. 200 ವರ್ಷಗಳ ಹಿಂದೆ ಆಗಿ ಹೋದ ಇತಿಹಾಸವನ್ನು ಈಗ ಚುನಾವಣೆಯ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಟಿಪ್ಪು ಸುಲ್ತಾನ್‌ ಹೇಗಿದ್ದ, ಏನೇನು ಇತಿಹಾಸ ನಡೆದಿದೆ ಎಂದು ಸಾಕಷ್ಟು ದಾಖಲೆಗಳಿವೆ. ಇತಿಹಾಸಕಾರರು, ಸಂಶೋಧಕರು ದಾಖಲೆ ಸಮೇತ ಬರೆದಿದ್ದಾರೆ. ಬಿಜೆಪಿಯವರು ಹಿಂದೂ ಧರ್ಮಕ್ಕೇ ಅಗೌರವ ತರುವಂತೆ ಎಲ್ಲವನ್ನೂ ತಿರುಚುತ್ತಿದ್ದಾರೆ’ ಎಂದು ಕಿಡಿ ಕಾರಿದರು.

‘ಸಿ.ಟಿ.ರವಿ, ಸಿ.ಎನ್‌. ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆ ಅವರು ಶಾಲೆಗೆ ಹೋಗಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅವರಿಗೆ ಪಾಠ ಮಾಡಿದ ಗುರುಗಳೇ ಈಗ ಅಚ್ಚರಿಪಡುವಂತಾಗಿದೆ. ನಾನು ಇವರಿಗೆ ಈ ರೀತಿ ಪಾಠವನ್ನೇ ಮಾಡಿಲ್ಲ ಹೇಗೆ ಸೃಷ್ಟಿ ಮಾಡಿದರು ಎಂದು ಅವರ ಗುರುಗಳೇ ಅಚ್ಚರಿಪಟ್ಟಿದ್ದಾರೆ’ ಎಂದೂ ಮೂದಲಿಸಿದರು.

‘ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ಬಗ್ಗೆ ಬಿಜೆಪಿ ನಾಯಕರು ಭಯ ಬಿದ್ದಿದ್ದಾರೆ. ರೈತರಿಗೆ, ಮಹಿಳೆಯರಿಗೆ, ಯುವಜನರಿಗೆ ನಾವು ಮಾಡಿದ ಘೋಷಣೆಗಳನ್ನೇ ಅವರು ಹಿಂಬಾಲಿಸುತ್ತಿದ್ದಾರೆ. ಈ ಹಿಂದೆ ನೀಡಿದ ಸರ್ಕಾರದ ಭರವಸೆಗಳನ್ನೇ ಮತ್ತೆ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಇದು ಬಿಜೆಪಿಗರಿಗೆ ನಾಚಿಕೆ ಬರುವಂಥ ಸಂಗತಿ’ ಎಂದೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.